ಎನ್‍ಟಿಆರ್ : ದಲಿತ ಯುವಕನೊಬ್ಬನನ್ನು ಥಳಿಸಿರುವ ಆರು ದುಷ್ಕರ್ಮಿಗಳು, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ಘಟನೆಯು ಆಂಧ್ರಪ್ರದೇಶದ ಎನ್‍ಟಿಆರ್ ಜಿಲ್ಲೆಯಲ್ಲಿ ನಡೆದಿದೆ ಎಂದು ndtv.com ವರದಿ ಮಾಡಿದೆ.
ಸಂತ್ರಸ್ತ ವ್ಯಕ್ತಿಯನ್ನು ಶ್ಯಾಮ್ ಕುಮಾರ್ ಎಂದು ಗುರುತಿಸಲಾಗಿದ್ದು, ಎಲ್ಲ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಸ್ವೀಕರಿಸಿರುವ ಮಾಹಿತಿಯ ಪ್ರಕಾರ, ಆರು ಮಂದಿ ದುಷ್ಕರ್ಮಿಗಳು ಆ ಯುವಕನನ್ನು ನಾಲ್ಕು ಗಂಟೆಗಳ ಕಾಲ ತಮ್ಮ ವಶದಲ್ಲಿರಿಸಿಕೊಂಡು ಮನ ಬಂದಂತೆ ಥಳಿಸಿದ್ದಾರೆ. ಆ ಯುವಕನು ಬಾಯಾರಿಕೆಯಿಂದ ನೀರು ಕೋರಿದಾಗ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೆ ವಿರೋಧ ಪಕ್ಷವಾದ ತೆಲುಗು ದೇಶಂ ಪಾರ್ಟಿಯ ಪರಿಶಿಷ್ಟ ಜಾತಿ ಘಟಕವು ಪ್ರತಿಭಟನೆ ನಡೆಸಿದ್ದು, ರಸ್ತೆ ತಡೆಯನ್ನೂ ಮಾಡಿದೆ.