ನವದೆಹಲಿ : ಈ ಬಾರಿಯ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ, ಜಯಂತ್ ಚೌಧುರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್ ಎಲ್ ಡಿ )ವು ಉತ್ತರಪ್ರದೇಶ ದಲ್ಲಿ ಬಿಜೆಪಿ ಜೊತೆ ಮೈತ್ರಿಯೇರ್ಪಡಿಸಿಕೊಳ್ಳುವುದನ್ನು ಗುರುವಾರ ದೃಢಪಡಿಸಿದೆ.
ನೂತನ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ ಆರ್ ಎಲ್ ಡಿ ಯು ಉತ್ತರಪ್ರದೇಶದ ಭಾಗ್ಪತ್ ಹಾಗೂ ಬಿಜನೋರ್ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
ಅಲ್ಲದೆ ಆರ್ ಎಲ್ ಡಿ ಗೆ ಒಂದು ರಾಜ್ಯಸಭಾ ಸ್ಥಾನವನ್ನು ಕೊಡಿಸುವ ಭರವಸೆಯನ್ನೂ ಬಿಜೆಪಿ ನೀಡಿದೆ ಎಂದು ‘ಇಂಡಿಯಾ ಟುಡೇ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಲೋಕಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವಂತೆಯೇ, ಎನ್ಡಿಎ ಪಾಳಯಕ್ಕೆ ಲೋಕದಳ ಸೇರ್ಪಡೆಯು ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ.





