ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಬರಿಮಲೆಗೆ ಬರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಡಿಸೆಂಬರ್ 6ರಿಂದ ಪ್ರತಿದಿನ ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಆಗಮಿಸುತ್ತಿದ್ದು, ಭಕ್ತಸಾಗರವನ್ನು ನಿಯಂತ್ರಿಸುವುದು ಸದ್ಯ ಕೇರಳ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇನ್ನು ಶಬರಿಮಲೆ ಕ್ಷೇತ್ರದಲ್ಲಿ ಭಕ್ತರದಟ್ಟಣೆ ಹೆಚ್ಚಿದ್ದು ಅನೇಕ ಭಕ್ತಾದಿಗಳು ದೇವರ ದರ್ಶನ ಪಡೆಯದೇ ಹಿಂದಿರುಗುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ. ಇಂದು ಬೆಳಗ್ಗೆ ಸರತಿ ಸಾಲಿನಲ್ಲಿ ನಿಂತಿದ್ದ ತಮಿಳುನಾಡು ಮೂಲದ 12 ವರ್ಷದ ಬಾಲಕಿ ಪದ್ಮಶ್ರೀ ಎಂಬಾಕೆ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ.
ದೇವಸ್ಥಾನದ ಅಪ್ಪಾಚಿಮೇಡು ಎಂಬ ಸ್ಥಳದಲ್ಲಿ ಬಾಲಕಿ ಕುಸಿದುಬಿದ್ದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ. ಬಾಲಕಿಗೆ ಈ ಹಿಂದಿನಿಂದಲೂ ಉಸಿರಾಟದ ಸಮಸ್ಯೆಯಿದ್ದು, ಮೂರು ವರ್ಷಗಳಿಂದ ಹೃದ್ರೋಗ ಚಿಕಿತ್ಸೆ ಪಡೆಯುತ್ತಿದ್ದಳು ಹಾಗೂ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಲೇ ಶಬರಿಮಲೆ ಏರಲು ನಿರ್ಧರಿಸಿದ್ದಳು ಎನ್ನಲಾಗಿದೆ. ಬಾಲಕಿಯ ಸಾವಿನ ಬೆನ್ನಲ್ಲೇ ದೇವಾಲಯದ ಆಡಳಿತ ಮಂಡಳಿ ಹಾಗೂ ಕೇರಳ ರಾಜ್ಯ ಸರ್ಕಾರದ ವಿರುದ್ಧ ಯಾತ್ರಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.




