11 ರಾಜ್ಯಸಭಾ ಸದಸ್ಯರ ವಿರುದ್ಧದ ಅಮಾನತು ಆದೇಶನವನ್ನು ಇಂದು ( ಜನವರಿ 30 ) ಹಿಂಪಡೆಯಲಾಗಿದೆ. ನಾಳೆಯಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಮಾನತು ವಾಪಸ್ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಸಂಬಂಧಪಟ್ಟ ವಿಶೇಷಾಧಿಕಾರ ಸಮಿತಿಯೊಂದಿಗೆ ಮಾತನಾಡಿ ಅಮಾನತುಗೊಂಡಿರುವ ಎಲ್ಲಾ ಸಂಸದರ ಅಮಾನತನ್ನು ಹಿಂಪಡೆಯುವಂತೆ ಮನವಿ ಮಾಡಲಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿಕೆ ನೀಡಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸಂಸತ್ ಭವನದಲ್ಲಿ ಉಂಟಾಗಿದ್ದ ಭದ್ರತಾ ಲೋಪದ ಕುರಿತಾಗಿ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಒಟ್ಟು 146 ಸಂಸದರನ್ನು ಅಮಾನತುಗೊಳಿಸಲಾಗಿತ್ತು.
ಈ ಪೈಕಿ 132 ಸಂಸದರನ್ನು ಚಳಿಗಾಲದ ಉಳಿದ ಅವಧಿವರೆಗೆ ಅಮಾನತುಗೊಳಿಸಲಾಗಿತ್ತು. ಉಳಿದ 14 ಸಂಸದರನ್ನು ( ರಾಜ್ಯಸಭೆಯ 11 ಹಾಗೂ ಲೋಕಸಭೆಯ 3 ಸಂಸದರು ) ಹಕ್ಕುಬಾಧ್ಯತಾ ಸಮಿತಿಗಳು ನಿರ್ಧರಿಸುವವರೆಗೆ ಅಮಾನತು ಮಾಡಲಾಗಿತ್ತು. ಈ ಪೈಕಿ ಮೂವರು ಲೋಕಸಭಾ ಸದಸ್ಯರ ಅಮಾನತನ್ನು ವಿಶೇಷಾಧಿಕಾರ ಸಮಿತಿಗಳು ಜನವರಿ 13ರಂದು ಹಿಂಪಡೆದಿತ್ತು. ಇಂದು 11 ರಾಜ್ಯಸಭಾ ಸದಸ್ಯರ ಅಮಾನತನ್ನು ಹಿಂಪಡೆಯಲಾಗಿದೆ.





