Mysore
23
haze

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಪುಣೆಯಲ್ಲಿ ಝೀಕಾ ವೈರಸ್‌ ಅಬ್ಬರ: ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕಠಿಣ ಕ್ರಮ

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ 55 ವರ್ಷದ ಮಹಿಳೆಯಲ್ಲಿ ಝೀಕಾ ವೈರಸ್‌ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರದವರೆಗೆ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 28 ಹಾಗೂ 35 ವರ್ಷದ ಇಬ್ಬರು ಗರ್ಭಿಣಿಯರಲ್ಲಿ ಸೋಂಕು ಇರುವುದು ದೃಢವಾಗಿತ್ತು.

ಇಂದು ಪತ್ತೆಯಾದ ಪ್ರಕರಣದಲ್ಲಿ ದಹಾನುಕಲ್‌ ಕಾಲೋನಿಯ ಮಹಿಳೆಯು ತುರಿಕೆ ಹಾಗೂ ಸಂಧಿ ನೋವು ಸಮಸ್ಯೆಯಿಂದ ಬಳಲುತ್ತಿದ್ದರು. ತಪಾಸಣೆ ನಡೆಸಿದ ನಂತರ ಇವರಲ್ಲಿ ಝೀಕಾ ವೈರಾಣು ಇರುವುದು ಖಚಿತವಾಗಿದೆ. ಮಹಿಳೆ ಆರೋಗ್ಯವಾಗಿದ್ದಾರೆ. ಆಸ್ಪತ್ರೆ ದಾಖಲಾತಿಯ ಅಗತ್ಯವಿಲ್ಲ ಎಂದು ಪುಣೆ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗರ್ಭಿಣಿಯರಲ್ಲಿ ಝೀಕಾ ವೈರಾಣುವಿನ ಸೋಂಕು ಉಲ್ಬಣಿಸಿದ್ದಲ್ಲಿ ಮೈಕ್ರೊಸೆಫಲಿ ಸಮಸ್ಯೆ ಎದುರಾಗುವ ಅಪಾಯವಿದೆ. ಇದರಲ್ಲಿ ಭ್ರೂಣದ ತಲೆಯ ಗಾತ್ರ ಚಿಕ್ಕದಾಗಿ ಮೆದುಳು ಬೆಳವಣಿಗೆಯಾಗದಿರುವ ಅಪಾಯವೂ ಇದೆ ಎಂದು ತಜ್ಞರು ಹೇಳಿದ್ದಾರೆ.

ಝೀಕಾ ವೈರಸ್‌ ಹರಡಲು ಏಡಿಸ್‌ ಸೊಳ್ಳೆಯು ವಾಹಕದಂತೆ ಕೆಲಸ ಮಾಡುತ್ತದೆ. ಸೋಂಕು ಇರುವ ವ್ಯಕ್ತಿಗೆ ಕಚ್ಚಿ ರಕ್ತ ಹೀರುವ ಇವುಗಳು, ಆರೋಗ್ಯವಂತ ವ್ಯಕ್ತಿಗೂ ಕಚ್ಚಿದರೆ ಅವರಿಗೂ ಸೋಂಕು ತಗುಲುವ ಅಪಾಯವಿದೆ. ಡೆಂಗ್ಯೂ ಹಾಗೂ ಚಿಕನ್‌ಗುನ್ಯದಂತೆಯೇ ಝೀಕಾ ಕೂಡಾ ಒಬ್ಬರಿಗೆ ಹರಡುತ್ತದೆ.

ಝೀಕಾ ವೈರಸ್‌ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಮಹಾನಗರ ಪಾಲಿಕೆ ಮನೆ ಮನೆ ಸಮೀಕ್ಷೆ ಆರಂಭಿಸಿದೆ. ಬಡಾವಣೆಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸಲು ರಾಸಾಯನಿಕ ಸಿಂಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:
error: Content is protected !!