ನವದೆಹಲಿ: ರಾಜ್ಯ ಸರ್ಕಾರಕ್ಕೆ ಧರ್ಮಾಧಾರಿತ ಮೀಸಲಾತಿ ನೀಡಬಾರದೆಂಬ ಸಾಮಾನ್ಯ ಜ್ಞಾನವಿಲ್ಲದಿರುವುದು ದುರದಷ್ಟಕರ ಸಂಗತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಂದು(ಮಾರ್ಚ್.24) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, KTTP ಕಾಯ್ದೆಯನ್ನು ತಿದ್ದುಪಡಿ ಮಾಡಿ ಸಿವಿಲ್ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ 4 % ಮೀಸಲು ನೀಡುತ್ತಿರುವ ಕಾಂಗ್ರೆಸ್ ಪಕ್ಷದ ನಿರ್ಧಾರ ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು. ಈಗಾಗಲೇ ಆಂಧ್ರ ಹಾಗೂ ಕೋಲ್ಕತ್ತಾ ಉಚ್ಚ ನ್ಯಾಯಾಲಯಗಳು ಧರ್ಮಾಧಾರಿತ ಮೀಸಲಾತಿಯನ್ನು ಕೊಡಬಾರದು ಎಂದು ಆದೇಶ ನೀಡಿದೆ. ಮೀಸಲಾತಿಯು ಧರ್ಮದ ಆಧಾರದ ಮೇಲಿರರಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ‘ಮೌಖಿಕ ಸೂಚನೆ’ ನೀಡಿತ್ತು ಎಂದು ಹೇಳಿದ್ದಾರೆ.
ಈ ಹಿಂದೆ 4 % ಮೀಸಲಾತಿ ಎಲ್ಲ ಅಲ್ಪ ಸಂಖ್ಯಾತ ಸಮುದಾಯಗಳಿಗೂ ಅನ್ವಯ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರ ಈಗ ಕೇವಲ ಮುಸಲ್ಮಾನರಿಗೆ ಮಾತ್ರ ಅನ್ವಯ ಎಂದು ಹೇಳಿರುವುದು ಇವರ ಕುಟಿಲ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದ್ದಾರೆ.
ಮೀಸಲಾತಿ ಸಾಮಾಜಿಕ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರಿಗೆ ನೀಡಬೇಕೆ ಹೊರತು ಧರ್ಮಾಧಾರಿತವಾಗಿ ಕೊಡಬಾರದು ಎಂಬ ಸಾಮಾನ್ಯ ಜ್ಞಾನ ಕಾಂಗ್ರೆಸ್ ನವರಿಗೆ ಇಲ್ಲ ಎಂಬುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ವಿಧಾನಸಭಾ ಬಜೆಟ್ ಅಧಿವೇಶನ ಸಮಯದಲ್ಲಿ ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸುತ್ತಿದಾಗ ಸದನದಲ್ಲಿ ಹರಿದಾಡಿದ ಚೀಟಿಯೊಂದರ ಬಗ್ಗೆ ಭಾರೀ ಚರ್ಚೆಯಾಗುತ್ತಿರುವುದರ ಬಗ್ಗೆ ಮಾತನಾಡಿದ ಅವರು, ಆ ಚೀಟಿ ಯಾರು ಕಳಿಸಿದ್ದೆಂದು ಗೊತ್ತಿಲ್ಲ. ಆದರೆ ಹಿರಿಯ ಸಚಿವ ರಾಜಣ್ಣನವರು ಬಹಿರಂಗವಾಗೇ ಹನಿಟ್ರ್ಯಾಪ್ ಪ್ರಯತ್ನ ತನ್ನ ಮೇಲೆ ನಡೆಯುತ್ತಿದೆ ಎಂದಿದ್ದಾರೆ.
ಇನ್ನು ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹನಿಟ್ರ್ಯಾಪ್ ಅನ್ನು ಯಾಕೆ ಮಾಡುತ್ತಿದ್ದಾರೆ, ಯಾಕೆ ಬ್ಲ್ಯಾಕ್ ಮೇಲ್ ಪ್ರಯತ್ನ ನಡೆದಿದೆ ಎಂದು ಕರ್ನಾಟಕದ ಜನತೆಗೆ ಗೊತ್ತಾಗಬೇಕು. ಆದರೆ ಅವರ ಮಾತಿನ ಧಾಟಿ ನೋಡಿದರೆ ಕಾಂಗ್ರೆಸ್ ಪಕ್ಷದ ಮಂತ್ರಿಯೊಬ್ಬ ಭಾಗಿಯಾಗಿರುವಂತಿದೆ ಎಂದು ತಿಳಿಸಿದ್ದಾರೆ.





