Mysore
24
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ಆಲ್‌ಖೈದಾ ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ : ಬೆಂಗಳೂರಿನ ಶಂಕಿತ ಮಹಿಳೆಯ ಬಂಧನ

thieves arrested

ಬೆಂಗಳೂರು : ಕುಖ್ಯಾತ ಭಯೋತ್ಪಾದಕ ಆಲ್ ಖೈದಾ ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬೆಂಗಳೂರಿನ ಹೆಬ್ಬಾಳದ ಶಂಕಿತ ಮಹಿಳೆಯನ್ನು ಗುಜರಾತ್‍ನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳ ತಂಡ ಬಂಧಿಸಿದೆ.

ಜಾರ್ಖಂಡ್ ಮೂಲದ ಶಮಾ ಪರ್ವೀನ್ ಬಂಧಿತ ಆರೋಪಿ. ಉದ್ಯೋಗವರಿಸಿ ಬೆಂಗಳೂರಿನ ಹೆಬ್ಬಾಳದಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದ ತನ್ನ ಸಹೋದರನೊಂದಿಗೆ ವಾಸವಾಗಿದ್ದಳು. ಎಟಿಎಸ್, ಬೆಂಗಳೂರು ಪೊಲೀಸರ ಸ್ಥಳೀಯ ಬೆಂಬಲದೊಂದಿಗೆ ಶಮಾ ಇರುವ ಸ್ಥಳವನ್ನು ಪತ್ತೆಹಚ್ಚಿ ಆಕೆಯನ್ನು ವಶಕ್ಕೆ ಪಡೆದಿದೆ. ಬಂಧನದ ವೇಳೆ ಶಮಾ ನಿರುದ್ಯೋಗಿಯಾಗಿದ್ದರು.

ಶಮಾ ಪರ್ವೀನ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಾಮಿಲಾಗಿರುವುದು ರಹಸ್ಯ ತನಿಖೆಯಿಂದ ತಿಳಿದುಬಂದಿದೆ. ಆನ್‍ಲೈನ್ ಮೂಲಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಆಕೆಯಿಂದ ವಿವರವಾದ ಪುರಾವೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಂತರಿಕ ವಿಚಾರಣೆಯನ್ನು ಪ್ರಾರಂಭಿಸುತ್ತಿದೆ ಎಂದು ಎಟಿಎಸ್ ತಿಳಿಸಿದೆ.

ಭಯೋತ್ಪಾದನೆ ಬಗ್ಗೆ ಸಹಾನುಭೂತಿ ಹಾಗೂ ಆಲ್ ಖೈದಾ ಸಂಘಟನೆ ಜೊತೆ ಸಂಪರ್ಕ ಹೊಂದಿ ಇಲ್ಲಿಂದಲೇ ಭಯೋತ್ಪಾದಕರನ್ನು ನೇಮಕ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ.
ಬಂಧಿತ ಮಹಿಳೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಗುಜರಾತ್‍ಗೆ ಕರೆದೊಯ್ಯಲಾಗಿದೆ. ಗುಜರಾತ್ ಪೊಲೀಸರಿಗೆ ಟ್ರಾನ್ಸಿಟ್ ವಾರಂಟಿಯನ್ನು ನೀಡಿದೆ.

ಮೂಲಗಳ ಪ್ರಕಾರ ಪರ್ವೀನ್ ಭಯೋತ್ಪಾದಕ ಸಂಘಟನೆಗಳ ಪ್ರಮುಖರ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಕರ್ನಾಟಕದಿಂದ ಕಾರ್ಯಾಚರಣೆಗಳನ್ನು ಸಂಘಟಿಸುವ ಪ್ರಮುಖ ನಿರ್ವಾಹಕಳಾಗಿದ್ದಳು. ಕಳೆದ ವಾರ ಎಟಿಎಸ್ ಬಂಧಿಸಿದ ನಾಲ್ವರು ಅಲ್-ಖೈದಾ ಭಯೋತ್ಪಾದಕರಿಂದ ಪಡೆದ ಸುಳಿವುಗಳ ಆಧಾರದ ಮೇಲೆ ಈ ಬಂಧನ ಮಾಡಲಾಗಿದೆ.

ಬಂಧಿಸಲ್ಪಟ್ಟ ಮಹಿಳೆ ತೀವ್ರ ಮೂಲಭೂತವಾದಿಯಾಗಿದ್ದು, ಆನ್‍ಲೈನ್ ಭಯೋತ್ಪಾದನಾ ಮಾಡ್ಯೂಲ್ ನಡೆಸುತ್ತಿದ್ದರು. ಅಲ್ಲದೆ, ಆಕೆಯ ಪಾಕಿಸ್ತಾನಿ ಸಂಪರ್ಕಗಳು ಸಹ ಪತ್ತೆಯಾಗಿವೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಹೇಳಿದ್ದಾರೆಂದು ಅವರು ದೃಢಪಡಿಸಿದರು. ಅವರ ಎಲೆಕ್ಟ್ರಾನಿಕ್ ಸಾಧನಗಳಿಂದ ಪಾಕಿಸ್ತಾನದ ಪ್ರಮುಖ ಸಂಪರ್ಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾಲ್ವರು ಅಲ್-ಖೈದಾ ಭಯೋತ್ಪಾದಕರ ಬಂಧನ:- ಜುಲೈ 23ರಂದು, ಗುಜರಾತ್ ಎಟಿಎಸ್ ಭಾರತೀಯ ಉಪಖಂಡದಲ್ಲಿ ಅಲ್-ಖೈದಾ (ಎಕ್ಯೂಐಎಸ್) ನ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿ, ಭಯೋತ್ಪಾದಕ ಗುಂಪಿನ ನಾಲ್ವರು ಭಯೋತ್ಪಾದಕರನ್ನು ಬಂಧಿಸಿತ್ತು. ಭಯೋತ್ಪಾದಕರಲ್ಲಿ ಒಬ್ಬನನ್ನು ದೆಹಲಿಯಿಂದ, ಒಬ್ಬನನ್ನು ನೋಯ್ಡಾದಿಂದ ಮತ್ತು ಇಬ್ಬರನ್ನು ಗುಜರಾತ್‍ನ ಅಹಮದಾಬಾದ್ ಮತ್ತು ಮೋಡಸಾದಿಂದ ಬಂಧಿಸಲಾಗಿತ್ತು.

ನಾಲ್ವರು ಭಯೋತ್ಪಾದಕರನ್ನು ಮೊಹಮದ್ ರಿಜ್ವಾನ್ ಅವರ ಪುತ್ರ ಮೊಹಮದ್ ಫೈಕ್, ಮೊಹಮದ್ ರಯೀಸ್ ಅವರ ಪುತ್ರ ಮೊಹಮದ್ ಫರ್ದೀನ್,ಮಹಮದ್ ರಫೀಕ್ ಅವರ ಪುತ್ರ ಸೆಫುಲ್ಲಾ ಖುರೇಷಿ ಮತ್ತು ಆಸಿಫ್ ಅಲಿಯ ಪುತ್ರ ಜೀಶನ್ ಅಲಿ ಎಂದು ಗುರುತಿಸಲಾಗಿದೆ.

ನಾಲ್ವರು ಭಯೋತ್ಪಾದಕರು 20-25 ವರ್ಷ ವಯಸ್ಸಿನವರು. ಅವರು ದೇಶದಲ್ಲಿ ದೊಡ್ಡ ದಾಳಿ ನಡೆಸಲು ಸಂಚು ರೂಪಿಸಿದ್ದರು. ನಾಲ್ವರು ಭಯೋತ್ಪಾದಕರು ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದರು, ಇದೀಗ ಎಟಿಎಸ್ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದೆ.

ಶಂಕಿತ ಉಗ್ರರ ಬಂಧನದ ನಂತರ ಚೋದನಕಾರಿ, ಜಿಹಾದಿ ವಿಡಿಯೋಗಳನ್ನು ಪ್ರಸಾರ ಮಾಡುವ ಐದು ಇನ್‍ಸ್ಟಾಗ್ರಾಮ್ ಖಾತೆಗಳ ಮೇಲೆ ಎಟಿಎಸ್ ಕಟ್ಟಿತ್ತು. ಅವುಗಳನ್ನು ಒಬ್ಬನೇ ಆರೋಪಿ ನಿರ್ವಹಿಸುತ್ತಿರುವುದು ಗೊತ್ತಾಗಿತ್ತು. ಖಾತೆಯ ಮೂಲ ಪತ್ತೆಹಚ್ಚಿದ ನಂತರ, ಎಫ್‍ಎಸ್‍ಎಲ್ ಸೇರಿದಂತೆ ನಾಲ್ಕು ವಿಭಿನ್ನ ತಂಡಗಳನ್ನು ರಚಿಸಲಾಗಿತ್ತು. ನಂತರ ಎಟಿಎಸ್ ಅಧಿಕಾರಿಗಳು ಆರೋಪಿಗಳ ಬೆನ್ನತ್ತಿ ಬಂಧಿಸಿದ್ದರು.

Tags:
error: Content is protected !!