ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮತ್ತೆ ಸ್ನೇಹ ಮುಂದುವರಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೋದಿ ಜೊತೆ ಸದಾಕಾಲ ಸ್ನೇಹಿತನಾಗಿರುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವನೆಗಳು ಮತ್ತು ನಮ್ಮ ಸಂಬಂಧಗಳ ಬಗ್ಗೆ ಅವರ ಸಕಾರಾತ್ಮಕ ಮೌಲ್ಯಮಾಪನವನ್ನು ನಾನು ತುಂಬಾ ಗೌರವಿಸುತ್ತೇನೆ. ಅವರ ಭಾವನೆಯು ಸಂಪೂರ್ಣವಾಗಿ ಪರಸ್ಪರ ಪೂರಕವಾಗಿದೆ. ಭಾರತ ಹಾಗೂ ಅಮೇರಿಕಾಗಳು ಬಹಳ ಸಕಾರಾತ್ಮಕ ಮತ್ಯು ಭವಿಷ್ಯದ ದೃಷ್ಟಿಕೋನದ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಡೊನಾಲ್ಡ್ ಟ್ರಂಪ್ ಹಾಗೂ POTUS ಅವರನ್ನು ಟ್ಯಾಗ್ ಮಾಡಿ ಈ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.
ಈ ಮೂಲಕ ಭಾರತ ಹಾಗೂ ಅಮೇರಿಕಾ ನಡುವೆ ಶುರುವಾಗಿದ್ದ ಸುಂಕಾಸ್ತ್ರದ ಕಾರ್ಮೋಡ ಅಂತ್ಯಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಲಾಗುತ್ತಿದೆ.





