Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಹನಿಮೂನ್‌ ಹಂತಕಿ : ಖಾಕಿ ಬಲೆಗೆ ಸಿಕ್ಕಿಬಿದ್ದಿದ್ದೇ ರೋಚಕ!

meghalaya murder

ಮೇಘಾಲಯ : ಹನಿಮೂನ್‍ಗೆಂದು ಮೇಘಾಲಯಕ್ಕೆ ತೆರಳಿದ್ದ ʼಇಂದೋರ್ ದಂಪತಿʼ ನಾಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯೇ ಪತಿಯ ಕೊಲೆಗೆ ಸಂಚು ರೂಪಿಸಿ ಕೊಲೆಗೆ ಸುಪಾರಿ ನೀಡಿರುವುದಾಗಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಹತ್ಯೆ ಆರೋಪದಡಿ ಉತ್ತರ ಪ್ರದೇಶದ ಗಾಜಿಪುರದಲ್ಲಿ ಪತ್ನಿಯನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ, ನವವಧು ಸೋನಮ್ ಸುಪಾರಿ ಕೊಟ್ಟು ತನ್ನ ಪತಿಯ ಕೊಲೆ ಮಾಡಿಸಿರುವ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಸೋನಮ್ ಕೊಲೆಗಾರರನ್ನು ನೇಮಿಸಿಕೊಂಡು ಹನಿಮೂನ್ ಸಮಯದಲ್ಲಿ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಮೇಘಾಲಯ ಡಿಜಿಪಿ ಇದಶಿಶಾ ನೊಂಗ್ರಾಂಗ್ ಹೇಳಿದ್ದಾರೆ.

ಮೇಘಾಲಯಕ್ಕೆ ಮಧುಚಂದ್ರಕ್ಕೆ ತೆರಳಿದ್ದ ರಾಜಾ ರಘುವಂಶಿ ಹಾಗೂ ಸೋನಮ್ ಮೇ 23ರಂದು ನಾಪತ್ತೆಯಾಗಿದ್ದರು. ಫೋನ್ ಸ್ವಿಚ್ ಆಫ್‌ ಆಗಿದ್ದರಿಂದ ಸಂಪರ್ಕಿಸಲಾಗದೆ, ಕುಟುಂಬಸ್ಥರು ಶಿಲ್ಲಾಂಗ್ ತೆರಳಿ ಪೊಲೀಸ್ ಪ್ರಕರಣ ದಾಖಲಿಸಿದ್ದರು. ಬಳಿಕ ಹುಡುಕಾಟ ನಡೆಸಿದಾಗ ಜೂನ್ 2ರಂದು ವೈಸಾವ್ಡಾಂಗ್ ಜಲಪಾತದ ಕಮರಿಯಲ್ಲಿ ರಘುವಂಶಿ ಮೃತದೇಹ ಪತ್ತೆಯಾಗಿತ್ತು. ಆದರೆ ಸೋನಮ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಘಟನೆಗೂ ಮುನ್ನ ದಂಪತಿಯು ಒಟ್ಟಿಗೆ ಇರುವ ವಿಡಿಯೋಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.

ಆದರೆ, ರಘುವಂಶಿ ಬಳಿಯಿದ್ದ ಚಿನ್ನದ ಉಂಗುರ ಮತ್ತು ಕುತ್ತಿಗೆಯಲ್ಲಿ ಚೈನ್ ಕಾಣೆಯಾಗಿದ್ದು, ಅವರನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನ ಮೂಡಿಸಿತ್ತು. ಅಲ್ಲದೆ, ಒಂದು ದಿನದ ಬಳಿಕ ಸಮೀಪದಲ್ಲೇ, ರಕ್ತಸಿಕ್ತವಾಗಿದ್ದ ಮಾರಕಾಸ್ತ್ರವೂ ಕೂಡ ಕಂಡುಬಂದಿತು. ಆದಾದ ಎರಡು ದಿನಗಳ ನಂತರ, ದಂಪತಿ ಬಳಸಿದ ರೇನ್‍ಕೋಟ್ ಅನ್ನು ಹೋಲುವಂತಹ ರೇನ್‍ಕೋಟ್ ವೊಂದು ಮಾವ್ಕ್ಮಾ ಗ್ರಾಮದಲ್ಲಿ ಪತ್ತೆಯಾಗಿತ್ತು. ಸೊಹ್ರಾರಿಮ್ ಹಾಗೂ ರಘುವಂಶಿ ಶವ ಪತ್ತೆಯಾದ ಕಮರಿಯ ನಡುವಿನ ಮಧ್ಯೆ ದಾರಿಯಲ್ಲಿ ರೇನ್‍ಕೋಟ್ ಕಂಡುಬಂದಿತ್ತು. ಇದೂ ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಹನಿಮೂನ್‍ಗೆಂದು ಮೇಘಾಲಯಕ್ಕೆ ಆಗಮಿಸಿದ್ದ ದಂಪತಿ, ಮಳೆಯಲ್ಲಿ ಸಮೃದ್ಧಿಯಾದ ಬೆಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಚಿರಾಪುಂಜಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು. ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆಳವಾದ ಕಂದಕದಲ್ಲಿ ಮೃತದೇಹವೊಂದು ಸಿಕ್ಕಿದ್ದು, ಕೈಯಲ್ಲಿದ್ದ ಟ್ಯಾಟೂ ನೋಡಿ ಇದು ಮೃತ ರಘುವಂಶಿಯದ್ದೇ ಎಂದು ಪತ್ತೆ ಮಾಡಲಾಗಿತ್ತು. ಪತ್ನಿಯ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ಸ್ಥಳೀಯ ಗೈಡ್‍ವೊಬ್ಬರ ಹೇಳಿಕೆ ಪ್ರಕರಣಕ್ಕೆ ರೋಚಕ ತಿರುವು ನೀಡಿತ್ತು.

ಗೈಡ್ ಹೇಳಿದ್ದೇನು?
ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‍ನಿಂದ ಮಾವ್ಲಾಖಿಯಾತ್‍ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‍ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‍ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು ಎಂದು ಹೇಳಿದ್ದಾರೆ.

ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದರೆ, ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿಗಳನ್ನು ನೋಡಿದ್ದ ಟೂರಿಸ್ಟ್ ಗೈಡ್
ಮಾವ್ಲಾಖಿಯಾತ್‍ನಲ್ಲಿರುವ ಪ್ರವಾಸಿ ಮಾರ್ಗದರ್ಶಿ ಆಲ್ಬರ್ಟ್ ಪಿಡೆ ಎಂಬವರು, ರಘುವಂಶಿ ಮತ್ತು ಪತ್ನಿ ಸೋನಮ್ ಕಾಣೆಯಾದ ದಿನದಂದು ಇತರ ಮೂವರು ಅವರೊಂದಿಗೆ ಇರುವುದನ್ನು ನೋಡಿದ್ದರು ಎಂದು ವರದಿಗಳಾಗಿದ್ದವು. ಮೇ 23ರಂದು ನೊಂಗ್ರಿಯಾಟ್‍ನಿಂದ ಮೌಲಾಖಿಯಾಟ್‍ಗೆ 3,000ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತುವ ವೇಳೆ ದಂಪತಿಯ ಜೊತೆ ಮೂವರು ಪುರುಷರೂ ಇದ್ದರು ಎಂದು ಆಲ್ಬರ್ಟ್ ಹೇಳಿದ್ದರು.

ಹಿಂದಿನ ದಿನ ನೊಂಗ್ರಿಯಾಟ್‍ನಲ್ಲಿರುವ ಪ್ರಸಿದ್ಧ ಲಿವಿಂಗ್ ರೂಟ್ಸ್ ಸೇತುವೆಯನ್ನು ನೋಡಲು ತೆರಳುವಾಗ ಆಲ್ಬರ್ಟ್ ದಂಪತಿಗೆ ಪ್ರವಾಸಿ ಮಾರ್ಗದರ್ಶನ ಮಾಡಿದ್ದರು. ಆದರೆ ಬಳಿಕ ದಂಪತಿಯು ಆಲ್ಬರ್ಟ್ ಬದಲಿಗೆ ಇನ್ನೊಬ್ಬ ಮಾರ್ಗದರ್ಶಿಯನ್ನು ನೇಮಿಸಿಕೊಂಡಿದ್ದರು. ದಂಪತಿಯೊಂದಿಗೆ ಇದ್ದ ಇತರ ಮೂವರು ಪುರುಷರು ಹಿಂದಿಯಲ್ಲಿ ಮಾತನಾಡುತ್ತಿದ್ದರು, ಅವರು ಸ್ಥಳೀಯರಲ್ಲ ಎಂದು ಗೊತ್ತಾಗಿತ್ತು ಎಂದು ಆಲ್ಬರ್ಟ್ ಮಾಹಿತಿ ನೀಡಿದ್ದರು.

ಪೊಲೀಸರ ಮುಂದೆ ಶರಣಾದ ಸೋನಮ್
ನಾಪತ್ತೆಯಾಗಿದ್ದ ಸೋನಮ್ ಉತ್ತರ ಪ್ರದೇಶದ ನಂದಗಂಜ್ ಪೊಲೀಸರ ಮುಂದೆ ಶರಣಾಗಿದ್ದಾರೆ. ನಂತರ ಅವರನ್ನು ವಶಕ್ಕೆ ಪಡೆಯಲಾಯಿತು. ಅಲ್ಲದೆ, ಇತರ ಮೂವರು ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸೋನಮ್ ಆರೋಪಿಗಳಿಗೆ ಹಣ ನೀಡಿ ಕೃತ್ಯ ಮಾಡಿಸಿದ್ದಾರೆ. ರಘುವಂಶಿಯನ್ನು ಕೊಲ್ಲಲು ಸೋನಮ್ ತಮ್ಮನ್ನು ನೇಮಿಸಿಕೊಂಡಿದ್ದಾಗಿ ಬಂಧಿತರು ಬಹಿರಂಗಪಡಿಸಿದ್ದಾರೆ ಎಂದು ಡಿಜಿಪಿಐ ನೊಂಗ್ರಾಂಗ್ ಸೋಮವಾರ ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅಲ್ಲದೆ, ಅಪರಾಧದಲ್ಲಿ ಭಾಗಿಯಾದ ಇನ್ನೂ ಕೆಲವರ ಬಂಧನಕ್ಕೆ ಮಧ್ಯಪ್ರದೇಶದಲ್ಲಿ ಕಾರ್ಯಾಚರಣೆ ಜಾರಿಯಲ್ಲಿದೆ.

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ರಾಜ್ಯ ಪೊಲೀಸರನ್ನು ಅಭಿನಂದಿಸಿದ್ದಾರೆ. ರಾಜಾ ಕೊಲೆ ಪ್ರಕರಣದಲ್ಲಿ ಮೇಘಾಲಯ ಪೊಲೀಸರು 7 ದಿನಗಳಲ್ಲೇ ಬೇಧಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಮಧ್ಯಪ್ರದೇಶದ ಮೂವರು ಹಂತಕರನ್ನು ಬಂಧಿಸಲಾಗಿದೆ. ಆರೋಪಿ ಮಹಿಳೆ ಶರಣಾಗಿದ್ದಾಳೆ. ಇನ್ನುಳಿದ ಹಂತಕರನ್ನು ಹಿಡಿಯಲು ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೊಲೆಗೆ ಕಾರಣ ನಿಗೂಢ
ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗಿರುವ ಆರೋಪಿ ಸೋನಮ್ ಈ ಕೊಲೆಗೆ ಕಾರಣವನ್ನು ಇನ್ನೂ ಬಾಯ್ಬಿಟ್ಟಿಲ್ಲ. ಪೊಲೀಸರ ವಿಚಾರಣೆಯಿಂದ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

Tags:
error: Content is protected !!