ತಿರುವನಂತಪುರಂ : 2025ರ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ವೈರಲ್ ಸ್ಟಾರ್ ಮೊನಾಲಿಸಾ ಭೋಸ್ಲೆ ಅವರು ತಮ್ಮ ಪ್ರಿಯಕರ ಮುಹಮ್ಮದ್ ಫರ್ಮಾನ್ ಖಾನ್ ಅವರನ್ನು ಮದುವೆಯಾಗಿದ್ದಾರೆ. ಕುಟುಂಬದ ತೀವ್ರ ವಿರೋಧದ ನಡುವೆಯೂ ಪೊಲೀಸ್ ರಕ್ಷಣೆಯಲ್ಲಿ ಕೇರಳದ ಅರುಮಾನೂರು ಶ್ರೀ ನೈನಾರ್ ದೇವಸ್ಥಾನದಲ್ಲಿ ಬುಧವಾರ (ಮಾರ್ಚ್ 11, 2026) ಈ ಸರಳ ವಿವಾಹ ನೆರವೇರಿದೆ.
ಮಧ್ಯಪ್ರದೇಶದ ಇಂದೋರ್ ನಿವಾಸಿ ಮೊನಾಲಿಸಾ ಭೋಸ್ಲೆ ಅವರು ಪ್ರಯಾಗರಾಜ್ ಕುಂಭಮೇಳದ ವೇಳೆ ತಮ್ಮ ಸುಂದರ ಕಣ್ಣುಗಳು ಮತ್ತು ನಗುವಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಖ್ಯಾತಿ ಪಡೆದಿದ್ದರು. ವರದಿ ಪ್ರಕಾರ ಮಹಾರಾಷ್ಟ್ರದ ಫರ್ಮಾನ್ ಅವರು ಆರು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಪರಿಚಿತರಾಗಿದ್ದರು. ಇತ್ತೀಚೆಗೆ ಮಲಯಾಳಂ ಸಿನಿಮಾ ಚಿತ್ರೀಕರಣ ಸಂಬಂಧ ಕೇರಳಕ್ಕೆ ಬಂದಿದ್ದರು.
ಹುಡುಗ ಯಾರು?
ಫರ್ಮಾನ್ ಖಾನ್ (ಮುಹಮ್ಮದ್ ಫರ್ಮಾನ್ ಖಾನ್) ಮಹಾರಾಷ್ಟ್ರದ ನಟ ಮತ್ತು ಮಾಡೆಲ್ ಆಗಿದ್ದಾರೆ. ಇಬ್ಬರೂ ಸುಮಾರು ಆರು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ಈ ಪ್ರೀತಿ ಅಂತರ್‌ಧರ್ಮೀಯ ವಿವಾಹಕ್ಕೆ ಕಾರಣವಾಗಿದೆ.
ವಿರೋಧಕ್ಕೆ ಕಾರಣ ಏನು?
ಮೊನಾಲಿಸಾ ಅವರ ತಂದೆ ವಿಜಯ್ ಸಿಂಗ್ ಭೋಸ್ಲೆ ಅವರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬೇರೊಬ್ಬ ಹುಡುಗನಿಗೆ ಮದುವೆ ಮಾಡಲು ಒತ್ತಾಯಿಸುತ್ತಿದ್ದ ತಂದೆಯಿಂದ ತಪ್ಪಿಸಿಕೊಳ್ಳಲು ಮೊನಾಲಿಸಾ ತಿರುವನಂತಪುರಂನ ಥಂಪನೂರ್ ಪೊಲೀಸ್ ಠಾಣೆಗೆ ಆಶ್ರಯ ಕೋರಿ ಮನವಿ ಸಲ್ಲಿಸಿದ್ದರು. ಪೊಲೀಸರು ಇಬ್ಬರೂ ವಯಸ್ಕರಾಗಿದ್ದು ತಮ್ಮ ಭವಿಷ್ಯ ತಾವೇ ನಿರ್ಧರಿಸುವ ಹಕ್ಕು ಹೊಂದಿದ್ದಾರೆ ಎಂದು ದೃಢಪಡಿಸಿ ರಕ್ಷಣೆ ಒದಗಿಸಿದ್ದಾರೆ. ಕುಟುಂಬದ ಮಾನಸಿಕ ಒತ್ತಡದಿಂದ ತಪ್ಪಿಸಿಕೊಂಡು ಇಬ್ಬರೂ ಕೇರಳದಲ್ಲಿ ಮದುವೆ ಆಗಿದ್ದಾರೆ.
ವಿವಾಹಕ್ಕೆ ಕೆಲವು ಸಿಪಿಐ(ಎಂ) ನಾಯಕರು, ಸಚಿವರು ಮತ್ತು ರಾಜ್ಯಸಭಾ ಸಂಸದರು ಬೆಂಬಲ ವ್ಯಕ್ತಪಡಿಸಿ ಉಪಸ್ಥಿತರಿದ್ದರು. ಮದುವೆಯ ನಂತರ ಮೊನಾಲಿಸಾ ಮತ್ತು ಫರ್ಮಾನ್ ಅವರು ‘ನಮ್ಮ ಪ್ರೀತಿಗೆ ಕುಟುಂಬದಿಂದ ವಿರೋಧವಿದೆ ಆದರೆ ನಾವು ನಮ್ಮ ನಿರ್ಧಾರದಲ್ಲಿ ದೃಢವಾಗಿದ್ದೇವೆ’ ಎಂದು ಹೇಳಿದ್ದಾರೆ.
ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವರು ವಯಸ್ಕರ ಸ್ವಂತ ನಿರ್ಧಾರಕ್ಕೆ ಬೆಂಬಲ ಸೂಚಿಸುತ್ತಿದ್ದರೆ, ಇನ್ನು ಕೆಲವರು ಅಂತರ್‌ಧರ್ಮೀಯ ವಿವಾಹಕ್ಕೆ ಟೀಕೆ ಮಾಡುತ್ತಿದ್ದಾರೆ. ಈ ವಿವಾಹವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರೀತಿಯ ವಿಷಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಕುಂಭಮೇಳ ಮೂಲಕ ಫೇಮಸ್
ಮೊನಾಲಿಸಾ ಭೋಸ್ಲೆ 2025ರ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮತ್ತು ಹೂಮಾಲೆಗಳನ್ನು ಮಾರುತ್ತಾ ಕುಳಿತಿದ್ದ ದೃಶ್ಯವೇ ಅವರನ್ನು ರಾತ್ರೋರಾತ್ರಿ ಸುಪರ್‌ಸ್ಟಾರ್ ಮಾಡಿತ್ತು. ಅವರ ನೀಲಿ-ಬೂದು ಬಣ್ಣದ ಕಣ್ಣುಗಳು, ನಗು ಮತ್ತು ಸೌಂದರ್ಯದಿಂದಾಗಿ ಲಕ್ಷಾಂತರ ವೀಕ್ಷಣೆ ಪಡೆದು ವೈರಲ್ ಆಗಿತ್ತು. ಇವರನ್ನು “ಬ್ರೌನ್ ಬ್ಯೂಟಿ” ಅಥವಾ “ಕುಂಭಮೇಳದ ಮೊನಾಲಿಸಾ” ಎಂದು ಕರೆಯುತ್ತಾರೆ.




