ಕೇರಳ: ವಯನಾಡು ಭೀಕರ ಭೂಕುಸಿತ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಸರ್ಕಾರ ಕ್ಯಾತೆ ತೆಗಿದಿದ್ದು, ಈ ಬಗ್ಗೆ ವಿಪಕ್ಷಗಳು ಕೇಂದ್ರವನ್ನು ಖಾರವಾಗಿ ಪ್ರಶ್ನಿಸಿದ್ದವು. ಈ ಹಿನ್ನೆಲೆ ಕೇರಳದ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ವರ್ಗೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಾನೂನು ಅಂಶಗಳನ್ನು ಪರಿಶೀಲಿಸಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
ವಯನಾಡಿನಲ್ಲಿ ಭೂಕುಸಿತ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಗೋಪಿ, ದುರಂತದ ಪರಿಣಾಮವನ್ನು ಅಧ್ಯಯನ ಮಾಡಬೇಕು. ವಿಕೋಪಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ತಮಗೆ ಕಂಡುಬಂದದ್ದನ್ನು ಮತ್ತು ಮನವರಿಕೆ ಆಗುವುದನ್ನು ಕೇಂದ್ರ ಸರ್ಕಾರದ ಮುಂದೆ ಪ್ರಸ್ತುತಪಡಿಸುವುದಾಗಿ ಅವರು ಪ್ರತಿಪಾದಿಸಿದರು.

ರಾಜ್ಯ ಸರ್ಕಾರವು ಸಹ ಭೂಕುಸಿತಗಳ ಪರಿಣಾಮವನ್ನು ಅಂದಾಜಿಸಿ ಕೇಂದ್ರ ಸರ್ಕಾರದ ನೆರವಿಗೆ ಮನವಿ ಸಲ್ಲಿಸಬೇಕೆಂದು ಅವರು ಸೂಚಿಸಿದರು.
ಈ ನಡುವೆ ಕೇರಳ ರಾಜ್ಯ ಸರ್ಕಾರ ಭೂಕುಸಿತವನ್ನು ರಾಜ್ಯ ವಿಪತ್ತು ಎಂದು ಘೋಷಿಸಲಾಗುವುದು ಎಂದು ತಿಳಿಸಿತ್ತು.





