ಹೊಸದಿಲ್ಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್‌ರಚಿಸಲಾದ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ವಿಸ್ತರಣೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
2025-26 ರವರೆಗೆ ಬೆಳೆ ವಿಮೆ ಯೋಜನೆ ಮುಂದುವರಿಸಲು ಬುಧವಾರ ಅನುಮೋದನೆ ಸಿಕ್ಕಿದು, ಈ ಪ್ರಮುಖ ಯೋಜನೆಗಳ ಅನುಷ್ಠಾನದ ವೇಳೆ ತಂತ್ರಜ್ಞಾನದ ಅಳವಡಿಕೆಗಾಗಿ ಪ್ರತ್ಯೇಕವಾಗಿ 824.77ಕೋಟಿ ನಿಧಿಯನ್ನು ರಚಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಪ್ರಸಾರ ಸಚಿವ ಅಶ್ವಿನ್ ವೈಷ್ಣವ್, ವಿಮೆಗಳ ಕುರಿತ ಯೋಜನೆಗಳಿಗೆ ರೈತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಈ ಯೋಜನೆಗಳನ್ನು ಐದನೈದನೆ ಹಣಕಾಸು ಆಯೋಗದ ಅವಧಿ ಮುಗಿಯುವವರೆಗು ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ತಾಂತ್ರಿಕ ಉಪಕ್ರಮಗಳಿಗೆ, ಸಂಶೋಧನಾ ಚಟುವಟಿಕೆಗಳಿಗೆ ಈ ನಿಧಿಯನ್ನು ಬಳಸಲಾಗುತ್ತದೆ. ಬೆಳೆ ಹಾನಿ, ಕ್ಲೈಮ್ ಇತ್ಯರ್ಥ ಮತ್ತು ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ತಂತ್ರಜ್ಞಾನ ಬಳಕೆ ಸಹಾಯವಾಗಲಿದೆ ಎಂದರು.
ತಂತ್ರಜ್ಞಾನ ಆಧಾರಿತ ಆದಾಯ ಮುನ್ಸೂಚನೆ ವ್ಯವಸ್ಥೆಯಡಿ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿಕೊಂಡು ಇಳುವರಿ ಅಂದಾಜು ಮಾಡಲಾಗುತ್ತದೆ. ಕರ್ನಾಟಕ ಸೇರಿದಂತೆ 9 ಪ್ರಮುಖ ರಾಜ್ಯಗಳು ಈ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಇತರ ರಾಜ್ಯಗಳಲ್ಲಿ ತಂತ್ರಜ್ಞಾನ ಅಳವಡಿಕೆ ಆರಂಭವಾಗಿದೆ ಎಂದು ಸಚಿವರು ತಿಳಿಸಿದರು.




