ಚಂಡೀಗಢ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಂಜಾಬ್ ಹಾಗೂ ಹರಿಯಾಣ ನಡುವಿನ ಶಂಭು ಗಡಿಯಲ್ಲಿ ನಡೆಯುತ್ತಿರುವ ಅನ್ನದಾತರ ಪ್ರತಿಭಟನೆಗೆ ಒಲಿಂಪಿಕ್ಸ್ ಕುಸ್ತಿಪಟು ವಿನೇಶ್ ಫೋಗಟ್ ಬೆಂಬಲ ಸೂಚಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ವಿನೇಶ್ ಫೋಗಟ್ ಅವರು, ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ. ನಿಮ್ಮ ಬೇಡಿಕೆಗಳು ಕಾನೂನು ಬಾಹಿರವಲ್ಲ ಎಂದರು.
ಎಲ್ಲಾ ರೈತರನ್ನು ನೋಡಿ ತುಂಬಾ ನೋವಾಗುತ್ತಿದೆ. ಕೆಲವೊಮ್ಮೆ ಅವರಿಗಾಗಿ ಏನು ಮಾಡಲು ಸಾಧ್ಯವಾಗದೇ ನಾವು ಅಸಹಾಯಕರಾಗುತ್ತೇವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ನಾವು ನಮ್ಮ ಕುಟುಂಬಕ್ಕಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಸರ್ಕಾರ ರೈತರ ಮಾತನ್ನು ಆಲಿಸಬೇಕು ಎಂದು ಮನವಿ ಮಾಡಿದರು.
200 ದಿನಗಳು ಕಳೆದರೂ ತಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗದ ಕಾರಣ ರೈತರು ರಸ್ತೆಯಲ್ಲೇ ಧರಣಿ ಕುಳಿತಿದ್ದಾರೆ. ಇದು ಬೇಸರದ ಸಂಗತಿ ಎಂದರು.
ರೈತರು ನಮಗೆ ಆಹಾರ ನೀಡದಿದ್ದರೆ, ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಹೇಗೆ ಸಾಧ್ಯವಾಗುತ್ತಿತ್ತು ಎಂದು ಪ್ರಶ್ನಿಸಿದ ಅವರು, ಸರ್ಕಾರವು ರೈತರ ಕಷ್ಟಗಳನ್ನು ಆಲಿಸಬೇಕು. ಅವರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಆಗ್ರಹಿಸಿದರು.





