Mysore
27
scattered clouds

Social Media

ಭಾನುವಾರ, 25 ಜನವರಿ 2026
Light
Dark

ರಾಜ್ಯದಲ್ಲಿ ಯೂರಿಯಾ ಗೊಬ್ಬರ ಅಭಾವ ಸೃಷ್ಟಿ: ಜೆ.ಪಿ.ನಡ್ಡಾಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

Siddaramaiah

ಬೆಂಗಳೂರು: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಅಭಾವ ಸೃಷ್ಟಿ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾಗೆ ಪತ್ರ ಬರೆದು ರಾಜ್ಯಕ್ಕೆ ಹಂಚಿಕೆಯಾದ ರಸಗೊಬ್ಬರ ಪ್ರಮಾಣವನ್ನು ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ, ರಾಜ್ಯಕ್ಕೆ ಒಟ್ಟು 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕೊಡಬೇಕಿತ್ತು. ಇಲ್ಲಿಯವರೆಗೆ 5.16 ಲಕ್ಷ ಮೆಟ್ರಿಕ್ ಟನ್ ಮಾತ್ರ ಕೊಡಲಾಗಿದೆ. ರಾಜ್ಯಕ್ಕೆ ಇನ್ನೂ 6.80 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬರಬೇಕಿದೆ. ಆದರೆ ಕೆಲ ಫರ್ಟಿಲೈಸರ್ ಕಂಪನಿಗಳು ಕೊರತೆಯ ಕಾರಣ ಹೇಳಿ ಯೂರಿಯಾ ಒದಗಿಸುತ್ತಿಲ್ಲ. ಹೀಗಾಗಿ ಕೂಡಲೇ ಯೂರಿಯಾ ಕೊಡುವಂತೆ ಒತ್ತಾಯಿಸಿದ್ದಾರೆ.

ಕಳೆದ ವರ್ಷಕ್ಕಿಂತ ಈ ಬಾರಿ ಮುಂಗಾರು ಮಳೆ ಹೆಚ್ಚಾಗಿದೆ. ಕಾವೇರಿ, ತುಂಗಭದ್ರಾ, ಕೃಷ್ಣಾದಿಂದ ನೀರು ಬಿಡುಗಡೆಯಾಗಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗಳನ್ನ ಪ್ರಾರಂಭ ಮಾಡಿದ್ದಾರೆ. ಕಳೆದ ವರ್ಷಕ್ಕಿಂತ ಎರಡು ಲಕ್ಷ ಹೆಕ್ಟೇರ್‌ಗಳಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿದೆ. ಹೀಗಾಗಿ ಕೂಡಲೇ ಯೂರಿಯಾ ಒದಗಿಸುವಂತೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರವು 2025ರ ಖಾರಿಫ್ ಬೆಳೆಗೆ ರಾಜ್ಯಕ್ಕೆ 11,17,000 ಮೆಟ್ರಿಕ್ ಟನ್ ಯೂರಿಯಾ ಹಂಚಿಕೆ ಮಾಡಿದೆ. ಈವರೆಗೆ ಕೇವಲ 5,16,959 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಮಾಡಲಾಗಿದೆ. ಆದರೆ ಏಪ್ರಿಲ್‌ನಿಂದ ಜುಲೈವರೆಗೆ ರಾಜ್ಯಕ್ಕೆ 6,80,655 ಮೆಟ್ರಿಕ್ ಟನ್ ಯೂರಿಯಾದ ಅವಶ್ಯಕತೆ ಇದೆ. ಕೆಲ ರಸಗೊಬ್ಬರ ಕಂಪನಿಗಳು ಕೇಂದ್ರವು ಮಾಡಿದ ಹಂಚಿಕೆಯ ಪ್ರಕಾರ ಯೂರಿಯಾ ಗೊಬ್ಬರ ಪೂರೈಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಯೂರಿಯಾ ಪೂರೈಕೆಯ ತುರ್ತು ಅವಶ್ಯಕತೆಯಿದೆ. ಏಕೆಂದರೆ ಕರ್ನಾಟಕಕ್ಕೆ ಈ ವರ್ಷದ ಆರಂಭದಲ್ಲಿಯೇ ಮಾನ್ಸೂನ್ ಬಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ವಿವಿಧ ಬೆಳೆಗಳ ವ್ಯಾಪ್ತಿಯು ಹೆಚ್ಚಾಗಿದೆ. ತುಂಗಭದ್ರಾ, ಕಾವೇರಿ ಮತ್ತು ಕೃಷ್ಣಾ ನದಿಗಳ ಆಯಕಟ್ಟಿನ ಪ್ರದೇಶಗಳಲ್ಲಿ ನೀರನ್ನು ಮೊದಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

13,000 ಹೆಕ್ಟೇರ್ ಖಾರಿಫ್ ಪೂರ್ವ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಯೂರಿಯಾ ಕೊರತೆಯು ರೈತರಲ್ಲಿ ಅಶಾಂತಿ ಆತಂಕವನ್ನು ಸೃಷ್ಟಿಸುತ್ತಿದೆ. ರೈತರ ಹಿತದೃಷ್ಟಿಯಿಂದ ರಾಜ್ಯ ಹಂಚಿಕೆ ಪ್ರಕಾರ ರಸಗೊಬ್ಬರ ಪೂರೈಸಿ. ಬಾಕಿ ಕೊರತೆ ಇರುವ ಯೂರಿಯಾದ ಪೂರೈಕೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Tags:
error: Content is protected !!