Mysore
27
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ‌ ಗಂಭೀರ ಆರೋಪ

7 ಗಣಿಗಳಿಗೆ ಅಕ್ರಮವಾಗಿ ಅನುಮತಿ ಕೊಟ್ಟಿದ್ದ ಸಿದ್ದರಾಮಯ್ಯ

ಹೊಸದಿಲ್ಲಿ : ಅಕ್ರಮ ಗಣಿಗಾರಿಕೆ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹೆಚ್.ಕೆ. ಪಾಟೀಲ್‌ ಬರೆದಿರುವ ಪತ್ರವನ್ನು ಕಸದ ಬುಟ್ಟಿಗೆ ಹಾಕಬೇಕು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.

ನವದೆಹಲಿಯ ತಮ್ಮ ಅಧಿಕೃತ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಕಳೆದ ಬಾರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಕಾನೂನುಬಾಹಿರವಾಗಿ ಏಳು ಗಣಿ ಕಂಪನಿಗಳಿಗೆ ಅನುಮತಿ ನೀಡಿದ್ದರು. ಅದರ ಬಗ್ಗೆ ಏನು ಹೇಳುತ್ತೀರಿ ಹೆಚ್.ಕೆ. ಪಾಟೀಲರೇ ಎಂದು ಖಾರವಾಗಿ ಪ್ರಶ್ನಿಸಿದರು.

ರಾಜಕೀಯ ದುರುದೇಶದಿಂದ ಹಾಗೂ ವಸತಿ ಇಲಾಖೆಯಲ್ಲಿ ಎದ್ದಿರುವ ಕಮೀಷನ್‌ ಮುಜುಗರದಿಂದ ಪಾರಾಗಲು ಹೆಚ್.ಕೆ. ಪಾಟೀಲ್‌ ಅವರ ಪತ್ರವನ್ನು ಹೊರಗೆ ಬಿಡಲಾಗಿದೆ ಎಂದು ಅವರು ಕಿಡಿಕಾರಿದರು.

ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಈಗ ಹೆಚ್.ಕೆ. ಪಾಟೀಲ್ ಎಚ್ಚರಗೊಂಡಿದ್ದಾರೆ. 1.5 ಲಕ್ಷ ಕೋಟಿ ಹಗರಣ ಆಗಿದೆ ಎಂದಿದ್ದಾರೆ. ಎರಡು ವರ್ಷದಿಂದ ತಾವು ಕಾನೂನು ಮಂತ್ರಿಯಾಗಿದ್ದರಿ, ಕುಂಭಕರ್ಣನ ನಿದ್ದೆಯಲ್ಲಿ ಇದ್ರಾ? ಎಂದು ಅವರಗೆ ಪ್ರಶ್ನೆ ಮಾಡಿದರು ಕೇಂದ್ರ ಸಚಿವರು.

ಹೆಚ್.ಕೆ. ಪಾಟೀಲ್ ಅವರು 10 ವರ್ಷಗಳ ಬಳಿಕ ಪತ್ರ ಬರೆದಿದ್ದಾರೆ. ಗ್ರೇಟ್.. ಸಿದ್ದರಾಮಯ್ಯನವರೇ, ಏನು ಮಾಡಿದ್ರೀ ನೀವು ರಾಜ್ಯದ ಸಂಪತ್ತು ಉಳಿಸಲು? ಹೆಚ್.ಕೆ. ಪಾಟೀಲರೇ ಡ್ರಾಮಾ ಬಿಡಿ. ನಿಮ್ಮ ನೇತೃತ್ವದ ಉಪ ಸಮಿತಿ ಕೊಟ್ಟ ವರದಿ ಇಟ್ಟುಕೊಂಡೇ ಸಿದ್ದರಾಮಯ್ಯ ಏನೂ ಮಾಡಿಲ್ಲ. ಈಗ ಪತ್ರ ಬರೆದು ಏನು ಮಾಡುತ್ತೀರಿ? ಅದನ್ನು ತೆಗೆದು ಕಸದಬುಟ್ಟಿಗೆ ಎಸೆಯಿರಿ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದಿರು.

ಕಳೆದ ಬಾರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಾನೂನುಬಾಹಿರವಾಗಿ ಏಳು ಗಣಿ ಕಂಪನಿಗಳಿಗೆ ಅನುಮತಿ ನೀಡಿದ್ದರು. ಅಲ್ಲಿ ಏನೆಲ್ಲಾ ನಡೆದಿದೆ ಎನ್ನುವುದು ನಿಮಗೆ ಗೊತ್ತಿಲ್ಲವೇ ಪಾಟೀಲರೇ? ಆ ಬಗ್ಗೆ ಮೌನವೇಕೆ? ಯಾವ ನೈತಿಕತೆ ಇಟ್ಟುಕೊಂಡು ಸಿದ್ದರಾಮಯ್ಯ ಪಕ್ಕದಲ್ಲಿ ಕೂತು ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡುತ್ತಿದ್ದೀರಿ ಹೆಚ್.ಕೆ. ಪಾಟೀಲರೇ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ನಾನು ಸಿದ್ದರಾಮಯ್ಯ ಗಣಿ ಅಕ್ರಮದ ಬಗ್ಗೆ ವಿಧಾನಮಂಡಲದಲ್ಲಿಯೂ ಮಾತನಾಡಿದದೇನೆ. ಏಳು ಗಣಿಗಳಿಗೆ ಸಿದ್ದರಾಮಯ್ಯ ಅವರು ಹಿಂದೆ ಸಿಎಂ ಆಗಿದ್ದಾಗ ಅಕ್ರಮವಾಗಿ ಅನುಮತಿ ನೀಡಿದ್ದಾರೆ. ಎಲ್ಲರ ಬಾಯಿ ಮುಚ್ಚಲು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇಡಿ, ಐಟಿ ಎಂದು ಕೇಂದ್ರ ಸರಕಾರವನ್ನು ದೂರುತ್ತಿದ್ದಾರೆ. ಹಾಗಾದರೆ ಇವರು ಮಾಡುತ್ತಿರುವುದು ಏನು? ಎಂದು ಅವರು ಕಿಡಿಕಾರಿದರು.

ರಾಜ್ಯದ ಜನರು ನನಗೆ ಶಕ್ತಿ ನೀಡಿ ಮುಂದೆ ಐದು ವರ್ಷ ಅಧಿಕಾರ ಕೊಟ್ಟರೆ ಈ ಹೆಚ್.ಕೆ. ಪಾಟೀಲ್ ಅವರು ಬರೆದ ಪತ್ರಕ್ಕೆ ಉತ್ತರ ಕೊಡುತ್ತೇನೆ. ಎಲ್ಲಾ ದಾಖಲೆಗಳನ್ನೂ ಇಟ್ಟುಕೊಂಡಿದ್ದೇನೆ. 2012ರಲ್ಲಿ ನನ್ನ ವಿರುದ್ಧ ಹಾಕಲಾದ ಕೇಸ್‌ ಅದು. ನನ್ನಿಂದ ರಾಜ್ಯಕ್ಕೆ ನಯಾಪೈಸೆ ನಷ್ಟವಾಗಿಲ್ಲ. ಇವರು ಕೊಳ್ಳೆ ಹೊಡೆದು ವಿದೇಶಗಳಿಗೆ ಅದಿರು, ಹಣ ಸಾಗಿಸಿದ ಹಾಗೆ ನಾನು ಮಾಡಿಲ್ಲ. ಈಗ ಕಾನೂನು ಸಚಿವರು ಪತ್ರ ಬರೆಯುತ್ತಾರೆ. ಯಾಕೆ ಬರೆದಿದ್ದೀರಿ ಪಾಟೀಲರೇ.. ನಮ್ಮನ್ನು ಹೆದರಿಸಲಿಕ್ಕಾ? ನಮ್ಮನ್ನು ಹೆದರಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ ಎಂದು ಕುಮಾರಸ್ವಾಮಿ ನೇರವಾಗಿ ಹೆಚ್.ಕೆ.ಪಾಟೀಲರಿಗೇ ಟಾಂಗ್‌ ಕೊಟ್ಟರು.

ಈ ಸರಕಾರದ ಸಿಎಂ, ಡಿಸಿಎಂ ಇಬ್ಬರಿಂದ ರಾಜ್ಯ ಹಾಳಾಗುತ್ತಿದೆ. ಕಾಂಗ್ರೆಸ್‌ ಹೈಕಮಾಂಡ್‌ ನಿಜಕ್ಕೂ ನೈತಿಕತೆ ಇದ್ದರೆ ಇವರಿಬ್ಬರ ರಾಜೀನಾಮೆ ತೆಗೆದುಕೊಂಡು ಯಾರಾದರೂ ಉತ್ತಮರಾದ ಮೂರನೇ ವ್ಯಕ್ತಿಯನ್ನು ಸಿಎಂ ಮಾಡಿ ರಾಜ್ಯದ ಮರ್ಯಾದೆ ಉಳಿಸಿ‌. ಉಳಿದ ಮೂರು ವರ್ಷವಾದರೂ ಸರಿಯಾಗಿ ಆಡಳಿತ ಮಾಡಿ ಎಂದು ಹೆಚ್ಡಿಕೆ ಒತ್ತಾಯಿಸಿದರು.

ಸಾಲಮನ್ನಾ; ನಾನು ಬಿಟ್ಟಿ ಪ್ರಚಾರ ಪಡೆದಿಲ್ಲ

ಕುಮಾರಸ್ವಾಮಿ ಸಾಲಮನ್ನಾ ಮಾಡಿ ಪ್ರಚಾರ ಮಾಡಿಕೊಂಡರು. ನಾನು 300 ಕೋಟಿ ತೀರಿಸಿದೆ ಎಂದು ತುಮಕೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ, 25000 ಕೋಟಿ ಸಾಲಮನ್ನಾ ಮಾಡಿದ್ದು ಯಾರು? ಸುಖಾಸುಮ್ಮನೆ ಸುಳ್ಳು ಹೇಳುವುದೇಕೆ? ಇಷ್ಟೆಲ್ಲಾ ಆದ ಮೇಲೆಯೂ ಇವರಿಗೆ ಸಿಎಂ ಸ್ಥಾನದಲ್ಲಿ ಮುಂದುವರಿಯುವ ಯೋಗ್ಯತೆ ಇದೆಯಾ? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

 

Tags:
error: Content is protected !!