ಬೆಂಗಳೂರು: ಸನಾತನ ಧರ್ಮವನ್ನು ಸಾಂಕ್ರಾಮಿಕ ರೋಗಕ್ಕೆ ಹೋಲಿಕೆ ಮಾಡಿ ಅಪಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ಉದಯ್‌ನಿಧಿ ಸ್ಟಾಲಿನ್ ಅವರು ಖುದ್ದು ಬೆಂಗಳೂರಿನ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದರು.
ಇಂದು (ಜೂನ್.25) ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದಾರೆ.
ಉದಯ್‌ನಿಧಿ ಸ್ಟಾಲಿನ್ ಹೇಳಿಕೆ ಉಲ್ಲೇಖಿಸಿ ಸಾಮಾಜಿಕ ಕಾರ್ಯಕರ್ತ ಪರಮೇಶ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಕೋರ್ಟ್ ನೋಟಿಸ್ ನೀಡಿತ್ತು. ಹೀಗಾಗಿ ಅವರು ನ್ಯಾಯಲಯಕ್ಕೆ ಹಾಜರಾಗಿದ್ದಾರೆ.
ಸೆಪ್ಟೆಂಬರ್ 4, 2023 ರಂದು ಚೆನ್ನೈನ ತೇನಂಪೇಟೆಯಲ್ಲಿ ನಡೆದಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ್ದ ಉದಯ್‌ನಿಧಿ ಸ್ಟಾಲಿನ್ ಅವರು, ಸನಾತನ ಧರ್ಮ ಡೆಂಗಿ ಮಲೇರಿಯಾ ಹಾಗೂ ಕೊರೊನಾ ಇದ್ದಂತೆ ಇವುಗಳನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಹೇಳಿದ್ದರು.
ಈ ಬಗ್ಗೆ ದೇಶಾದ್ಯಂತ ಹಲವಾರು ಹಿರಿಯ ಮುಖಂಡರು, ರಾಜಕೀಯ ವ್ಯಕ್ತಿಗಳು ವಿರೋಧಿಸಿದ್ದರು. ಹಾಗೂ ಸ್ಟಾಲಿನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.





