ಜಮ್ಮು-ಕಾಶ್ಮೀರ: ಕುಲ್ಗಾಮ್ ಅರಣ್ಯದಲ್ಲಿ ಆಪರೇಷನ್ ಅಕಲ್ ನಡೆಯುತ್ತಿದ್ದು, ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ 9 ಮಂದಿ ಸೇನಾ ಸಿಬ್ಬಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂಲಕ ಕಳೆದ ಏಳು ದಿನಗಳಲ್ಲಿ ಗಾಯಗೊಂಡ ಸೇನಾ ಸಿಬ್ಬಂದಿಗಳ ಒಟ್ಟು ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಇಬ್ಬರು ಯೋಧರಿಗೆ ಭಾರತೀಯ ಸೇನೆ ಸಂತಾಪ ಸೂಚಿಸಿದ್ದು, ಹುತಾತ್ಮ ಯೋಧರ ಧೈರ್ಯ ಹಾಗೂ ಸಮರ್ಪಣೆ ನಮಗೆ ಶಾಶ್ವತ ಸ್ಪೂರ್ತಿ ನೀಡುತ್ತದೆ ಎಂದು ಹೇಳಿದೆ. ಭಯೋತ್ಪಾದಕ ಅಡಗುತಾಣಗಳ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿಯ ನಂತರ ಪ್ರಾರಂಭವಾದ ಈ ಕಾರ್ಯಾಚರಣೆಯು ಜಮ್ಮು-ಕಾಶ್ಮೀರದ ಅರಣ್ಯ ಪಟ್ಟಿಗಳಲ್ಲಿ ವ್ಯಾಪಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತೀಯ ಸೇನೆ, ಪೊಲೀಸರು ಹಾಗೂ ಕೇಂದ್ರ ಮೀಸಲು ಪಡೆಯ ಜಂಟಿ ಪಡೆಗಳು ಉಗ್ರರ ಸಂಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇನ್ನು ಜಮ್ಮು-ಕಾಶ್ಮೀರದ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ನಮಗೆ ಮಾಹಿತಿ ನೀಡಿ ಎಂದು ಸ್ಥಳೀಯರಿಗೆ ಮನವಿ ಮಾಡಿದ್ದಾರೆ.





