ತಿರುವನಂತಪುರಂ: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣ ಸಂಬಂಧ ಕೇರಳದ ಕಮ್ಯುನಿಸ್ಟ್ ಪಕ್ಷದ ಸಂಸದರೊಬ್ಬರ ಹೆಸರು ತಳಕು ಹಾಕಿಕೊಂಡಿದೆ.
ಕಮ್ಯುನಿಸ್ಟ್ ಪಕ್ಷದ ರಾಜ್ಯಸಭಾ ಸದಸ್ಯ ಸಂತೋಷ್‍ಕುಮಾರ್ ಅವರೇ ತಲೆಬುರುಡೆಯನ್ನು ಪ್ರಕರಣದ ಪ್ರಮುಖ ಆರೋಪಿ ಪ್ರಸ್ತುತ ಎಸ್‍ಐಟಿ ವಶದಲ್ಲಿರುವ ಚಿನ್ನಯ್ಯ ಅವರಿಗೆ ತಂದುಕೊಟ್ಟಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಅವರು ತಿರುವಂತನಪುರಕ್ಕೆ ತೆರಳಿ ರಾಜ್ಯಸಭಾ ಸದಸ್ಯರೂ ಆಗಿರುವ ಸಂತೋಷ್‍ಕುಮಾರ್ ಅವರನ್ನು ಭೇಟಿಯಾಗಿ ತಲೆಬುರುಡೆ ಹಾಗ ಪ್ರಕರಣದ ಬಗ್ಗೆ ಯಾವ ಯಾವ ತಂತ್ರಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ರಹಸ್ಯ ಸ್ಥಳವೊಂದರಲ್ಲಿ ಚರ್ಚೆ ನಡೆಸಿದ್ದರು.
ಇದನ್ನು ಓದಿ:ಧರ್ಮಸ್ಥಳ ಪ್ರಕರಣ : ಮಹಿಳಾ ಸಂಘಟನೆಗಳಿಂದ ಸೋನಿಯಾಗೆ ಪತ್ರ
ಎಸ್‍ಐಟಿ ವಶದಲ್ಲಿರುವ ಚಿನ್ನಯ್ಯ ಹಾಗೂ ವಿಚಾರಣೆಗೆ ಹಾಜರಾಗಿದ್ದ ಗಿರೀಶ್ ಮಟ್ಟಣ್ಣನವರ್, ಜಯಂತ್, ಮಹೇಶ್ ಶೆಟ್ಟಿ ತಿಮರೋಡಿ ಅವರ ವಿಚಾರಣೆ ವೇಳೆ ಈ ಪ್ರಕರಣದ ಮಾಸ್ಟರ್ ಮೈಂಡ್ ಸಂತೋಷ್‍ಕುಮಾರ್ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ದೆಹಲಿಗೂ ತೆರಳಿದ್ದ ಈ ತಂಡವು ಸಂಸದರನ್ನು ಭೇಟಿಯಾಗಿ ಧರ್ಮಸ್ಥಳದಲ್ಲಿ ಕಳೆದ ಹಲವಾರು ವರ್ಷದಿಂದ ಶವಗಳನ್ನು ಹೂತು ಹಾಕಿದ್ದೇನೆ. ಈಗ ನನಗೆ ಇದರ ಪಾಪಪ್ರಜ್ಞೆ ಕಾಡುತ್ತಿದೆ. ಪೊಲೀಸರು ತನಿಖೆ ನಡೆಸಿದರೆ ಎಲ್ಲವನ್ನು ಬಾಯಿ ಬಿಡುವುದಾಗಿ ಹೇಳುವಂತೆ ಚಿನ್ನಯ್ಯನ ತಲೆಗೆ ತುಂಬಿದ್ದು ಈ ತಂಡ ಎಂಬುದು ಗೊತ್ತಾಗಿದೆ.
ಇದೀಗ ಎಸ್‍ಐಟಿ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಆರೋಪಿಸಿರುವ ರಾಜ್ಯಸಭಾ ಸದಸ್ಯನಿಗೆ ನೋಟಿಸ್ ನೀಡಲು ಸಿದ್ದತೆ ನಡೆಸಿದೆ. ಒಂದು ವೇಳೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದರೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ.





