ವಾಷಿಂಗ್ಟನ್ : ಇವತ್ತಿನ ರಾತ್ರಿ ಇರಾನ್‌ನ ಇಡೀ ನಾಗರಿಕತೆಯೇ ನಾಶವಾಗಲಿದೆ ಎಂದು ಬೆದರಿಕೆ ಒಡ್ಡಿದ ಕೆಲವೇ ಹೊತ್ತಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್‌ಗೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದಾರೆ.
ಇರಾನ್ ಮೂಲಸೌಕರ್ಯಗಳು, ಅಣು ವಿದ್ಯುತ್ ಘಟಕಗಳು, ಸೇತುವೆಗಳ ಮೇಲಿನ ದಾಳಿಯ ನಿರ್ಧಾರವನ್ನೂ ಟ್ರಂಪ್ ಹಿಂಪಡೆದಿದ್ದಾರೆ. ಇದಕ್ಕೂ ಮೊದಲು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಗಡುವು ಕೊಟ್ಟು, ಒಪ್ಪದಿದ್ದರೆ ಮಂಗಳವಾರ ರಾತ್ರಿ 8 ಗಂಟೆಗೆ ಇದರ ಅವಧಿ ಮುಗಿದು ಇರಾನ್‌ನ ಸರ್ವನಾಶ ಮಾಡುವುದಾಗಿ ಟ್ರಂಪ್ ಬೆದರಿಕೆ ಒಡ್ಡಿದ್ದರು. ಇದೀಗ ಈ ಗಡುವು 2 ವಾರ ಮುಂದೂಡಿಕೆಯಾಗಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರು ಮಧ್ಯಸ್ಥಿಕೆ ವಹಿಸಿ ಕೊಟ್ಟ ಪ್ರಸ್ತಾವನೆಯನ್ನು ಒಪ್ಪಿರುವುದಾಗಿ ಟ್ರಂಪ್ ಹೇಳಿದ್ದಾರೆ. ಈ ಪ್ರಸ್ತಾವನೆ ಪ್ರಕಾರ ಹರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರೆಯಬೇಕು. ಹಾಗೂ 2 ವಾರಗಳ ಕಾಲ ಕದನ ವಿರಾಮ ಮುಂದುವರಿಯುವ ಕುರಿತಾಗಿ ಇದೆ.
ಇನ್ನು ಈ 2 ವಾರಗಳ ಗಡುವನ್ನು ಇರಾನ್ ಜೊತೆ ಅಂತಿಮ ಒಪ್ಪಂದಕ್ಕೆ ಬರಲು ಬಳಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ಈಗಾಗಲೇ ಅಮೆರಿಕ ಎಲ್ಲಾ ಮಿಲಿಟರಿ ಗುರಿಗಳನ್ನು ತಲುಪಿದ್ದು, ಮಧ್ಯಪ್ರಾಚ್ಯದಲ್ಲಿ ಒಂದು ದೀರ್ಘಕಾಲದ ಶಾಂತಿಗಾಗಿ ಒಂದು ನಿಖರ ಒಪ್ಪಂದದ ಹಾದಿಯಲ್ಲಿದ್ದೇವೆ ಎಂದಿದ್ದಾರೆ.
ಇರಾನ್ ಕೂಡಾ ತನ್ನ ಬೇಡಿಕೆಯ 10 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕಕ್ಕೆ ಕೊಟ್ಟಿದೆ. ಇನ್ನೊಂದೆಡೆ ಹರ್ಮುಜ್ ತಕ್ಷಣ ತೆರೆದರೆ ಮಾತ್ರ 2 ವಾರಗಳ ಕದನ ವಿರಾಮ ಎಂದೂ ಟ್ರಂಪ್ ಷರತ್ತು ವಿಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಈ ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. ಪಾಕಿಸ್ತಾನದ ವಿನಂತಿಯ ಮೇರೆಗೆ ಅಮರಿಕದ 15 ಅಂಶಗಳ ಪ್ರಸ್ತಾವನೆಯನ್ನು ಮಾತುಕತೆ ನಡೆಸಲು ಸಿದ್ದರಿದ್ದೇವೆ. ಅಮೆರಿಕ ದಾಳಿ ಮಾಡುವುದು ನಿಲ್ಲಿಸಿದರೆ, ನಮ್ಮ ಸಶಸ್ತ್ರ ಪಡೆಗಳು ಕೂಡಾ ಪ್ರತಿದಾಳಿಯನ್ನು ನಿಲ್ಲಿಸುತ್ತದೆ ಎಂದಿದ್ದಾರೆ.




