ಆಂಧ್ರಪ್ರದೇಶ: ಆರ್ಥಿಕ ಲಾಭಕ್ಕಾಗಿ ತಮ್ಮ ಚಲನಚಿತ್ರಗಳನ್ನು ಹಿಂದಿಗೆ ಭಾಷಾಂತರ ಮಾಡಲು ಅವಕಾಶ ನೀಡುವ ತಮಿಳುನಾಡಿನ ರಾಜಕಾರಣಿಗಳು ಹಿಂದಿ ಭಾಷೆಯನ್ನು ಏಕೆ ವಿರೋಧಿಸುತ್ತಾರೆಂದು ಪ್ರಶ್ನಿಸುವ ಮೂಲಕ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಟಾಂಗ್ ನೀಡಿದ್ದಾರೆ.
ತಮಿಳುನಾಡು ಸರ್ಕಾರ ಹಿಂದೆ ಹೇರಿಕೆಯನ್ನು ವಿರೋಧಿಸುತ್ತಿದ್ದು, ಇತ್ತೀಚೆಗೆ ನಡೆದ ತಮಿಳುನಾಡು ರಾಜ್ಯ ಬಜೆಟ್‌ನಲ್ಲಿ ಹಿಂದಿ ಚಿಹ್ನೆಯ ರೂಪಾಯಿ ಬದಲು ತಮಿಳು ಭಾಷೆಯ ರೂಪಾಯಿ ಪದ ಬಳಕೆ ಮಾಡಿ ಈ ಮೂಲಕ ಹಿಂದಿ ಹೇರಿಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಸಿಎಂ ಸ್ಟಾಲಿನ್ ಕೂಡ ಕೇಂದ್ರ ಸರ್ಕಾರವೂ ತ್ರಿಭಾಷಾ ನೀತಿಯ ಮೂಲಕ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಈ ಕುರಿತು ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಪ್ರತಿಕ್ರಿಯೆ ನೀಡಿದ್ದು, ಈ ನಾಯಕರು ಹಿಂದಿಯನ್ನು ವಿರೋಧಿಸುತ್ತಾರೆ. ಆದರೆ, ಆರ್ಥಿಕ ಲಾಭಕ್ಕಾಗಿ ತಮಿಳು ಚಲನಚಿತ್ರಗಳನ್ನು ಹಿಂದಿಗೆ ಭಾಷಾಂತರ ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಕೆಲವರು ಸಂಸ್ಕೃತ ಹಾಗೂ ಹಿಂದಿಯನ್ನು ಯಾಕೆ ಟೀಕಿಸುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ಆರ್ಥಿಕ ಲಾಭಕ್ಕೋಸರ ತಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಲು ಅವಕಾಶ ನೀಡುವ ತಮಿಳುನಾಡಿನ ರಾಜಕಾರಣಿಗಳು ಹಿಂದಿ ಭಾಷೆಯನ್ನು ಏಕೆ ವಿರೋಧಿಸುತ್ತಾರೆ? ಅವರು ಬಾಲಿವುಡ್‌ನಿಂದ ಹಣ ಮಾಡಲು ಬಯಸುತ್ತಾರೆ ಅಷ್ಟೇ. ಹೀಗಾಗಿಯೇ ಹಿಂದಿಯನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಹಾಗಾದರೇ ಇದು ಯಾವ ರೀತಿಯ ತರ್ಕ ಎಂದು ಹೇಳಿದ್ದಾರೆ.
ಭಾರತ ವೈವಿಧ್ಯತೆಯಿಂದ ಕೂಡಿದೆ, ಅದಕ್ಕೆ ಹಿಂದಿ, ತಮಿಳು ಸೇರಿದಂತೆ ಎಲ್ಲಾ ಭಾಷೆಗಳು ಬೇಕು. ಈ ದೇಶದಲ್ಲಿ ಯಾವುದೋ ಎರಡು ಭಾಷೆಗಳಿದ್ದರೆ ಸಾಕಾಗುವುದಿಲ್ಲ ಎಂದಿದ್ದಾರೆ.





