ಕೊಲ್ಕತ್ತಾ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾ ಸಮೀಪದಲ್ಲಿ ಕಾಂಜನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಗೂಡ್ಸ್ ಗಾಡಿಯೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, 25 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಇಂದು(ಜೂ.17) ಬೆಳಿಗ್ಗೆ 9 ಗಂಟೆಗೆ ಈ ಘಟನೆ ಸಂಭವಿಸಿದ್ದು, ನಿಲ್ದಾಣ ಸಮೀಪ ಸಿಗ್ನಲ್‌ಗಾಗಿ ಕಾಯುತ್ತಿದ್ದ ಕಾಂಜನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಹಿಂದಿನಿಂದ ಗೂಡ್ಸ್ ರೈಲು ಬಂದು ಡಿಕ್ಕಿ ಹೊಡೆದಿದೆ. ಘಟನೆಯಿಂದ ರೈಲಿನ ಎರಡು ಬೋಗಿಗಳಿಗೆ ಭಾರೀ ಹಾನಿಯಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, 25 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿದೆ. ಗೂಡ್ಸ್ ಗಾಡಿ ಕಾಂಜನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಗಾಯಗೊಂಡವರನ್ನು ನ್ಯೂ ಜಲ್‌ಪೈಗುರಿ ಜಂಕ್ಷನ್ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಡಾರ್ಜಿಲಿಂಗ್ ಎಸ್‌ಪಿ ಅಭಿಷೇಕ್ ರಾಯ್ ಮಾಹಿತಿ ನೀಡಿದ್ದಾರೆ.
ರೈಲು ಅಪಘಾತದ ಬಗ್ಗೆ ತಿಳಿದು ಆಘಾತವಾಗಿದೆ. ಕಾಂಜನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಡಿಎಂ, ಎಸ್‌ಪಿ, ವೈದ್ಯರು, ಆಂಬುಲೆನ್ಸ್ ಮತ್ತು ವಿಪತ್ತು ನಿರ್ವಹಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರದೊಂದಿಗೆ ಸಂಪರ್ಕ ಕಲ್ಪಿಸುವ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಭಾರತೀಯ ಪ್ರಮುಖ ರೈಲು ಆಗಿದೆ. 13174 ಸಂಖ್ಯೆಯ ಈ ಎಕ್ಸ್‌ಪ್ರೆಸ್ ಅಗರ್ತಲಾದಿಂದ ಸೀಲ್ಹಾಹ್‌ಗೆ ಪ್ರಯಾಣಿಸುತ್ತಿದ್ದು, ರಂಗಪಾಣಿ ಮತ್ತು ಚಥರ್‌ಹತ್ ನಿಲ್ದಾಣದ ಮಧ್ಯೆ ಅಪಘಾತಕ್ಕೀಡಾಗಿ ಹಳಿ ತಪ್ಪಿದೆ.