ಹೈದರಾಬಾದ್: ಪುಷ್ಪ-2 ಪ್ರೀಮಿಯರ್ ಶೋ ವೇಳೆ ಥಿಯೇಟರ್‌ನಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ನಟ ಅಲ್ಲು ಅರ್ಜುನ್ ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲು ಜೊತೆ ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ದಿ ನಿಗಮ(ಎಫ್‌ಡಿಸಿ) ಅದ್ಯಕ್ಷ ದಿಲ್ ರಾಜು ಇದ್ದರು.
ನಟ ಅಲ್ಲು ಅರ್ಜುನ್ ಆಸ್ಪತ್ರೆ ಭೇಟಿಯ ಹಿನ್ನೆಲೆಯಲ್ಲಿ ಆಸ್ಪತ್ರೆ ಸುತ್ತಾ ಬಿಗಿ ಭದ್ರತೆ ಹೆಚ್ಚಿಸಲಾಗಿತ್ತು. ಜೊತೆಗೆ ಆಸ್ಪತ್ರೆಗೆ ಭೇಟಿ ನೀಡುವ ವಿಷಯವನ್ನು ಗೌಪ್ಯವಾಗಿ ಇಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪುಷ್ಪ-2 ಪ್ರದರ್ಶನದ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಮಹಿಳೆ ರೇವತಿ ಕುಟುಂಬಕ್ಕೆ ಚಿತ್ರದ ನಾಯಕ ಅಲ್ಲು ಅರ್ಜುನ್, ನಿರ್ದೇಶಕರು ಹಾಗೂ ನಿರ್ಮಾಣ ಸಂಸ್ಥೆ ಒಟ್ಟು 2 ಕೋಟಿ ರೂ ಪರಿಹಾರ ನೀಡಿದ್ದಾರೆ.
ಈಗ ಕಾಲ್ತುಳಿತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ನಟ ಅಲ್ಲು ಅರ್ಜುನ್ ದಿನಾ ಬೆಳಿಗ್ಗೆ ಆಸ್ಪತ್ರೆ ವೈದ್ಯರಿಂದ ಬಾಲಕ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





