ದೆಹಲಿ: ವಿಜಯೇಂದ್ರ ನಕಲಿ ನೊಟೀಸ್ ಮಾಡಿಸಿದ್ದಾನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಸ್ವಪಕ್ಷದವರ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಾ ಬಂದಿರುವ ಶಾಸಕ ಯತ್ನಾಳ್ ಅವರು, ತಮಗೆ ಶಿಸ್ತು ಸಮಿತಿ ನೋಟಿಸ್ ಬಂದಿರುವ ಬಗ್ಗೆ ಹೊಸ ವರಸೆ ತೆಗೆದಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿಂದು ಮಾತನಾಡಿದ ಅವರು, ವಿಜಯೇಂದ್ರನೇ ನಕಲಿ ನೊಟೀಸ್ ತಯಾರಿ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನಗೆ ಈವರೆಗೂ ಅಧಿಕೃತವಾಗಿ ಪಕ್ಷದ ಕೇಂದ್ರ ಸಮಿತಿಯಿಂದ ನೊಟೀಸ್ ಬಂದಿಲ್ಲ. ವಾಟ್ಸ್‌ಆಪ್‌ನಲ್ಲಿ ನೊಟೀಸ್ ಬಂದಿದೆ. ಅಲ್ಲಿ ಬಂದಿರುವುದನ್ನು ಹೇಗೆ ನಂಬಲಿ? ನನಗೆ ಯಾಕೋ ವಿಜಯೇಂದ್ರನೇ ನಕಲಿ ನೊಟೀಸ್ ಮಾಡಿಸಿದ್ದಾನೆ ಎನಿಸುತ್ತಿದೆ. ನನಗೆ ಅಧಿಕೃತವಾಗಿ ನೊಟೀಸ್ ಬಂದ ಬಳಿಕ ಸರಿಯಾದ ಉತ್ತರ ನೀಡುತ್ತೇನೆ ಎಂದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್ ಅವರು, ನಾನು ಸ್ವಂತ ಸಾಮರ್ಥ್ಯದ ಮೇಲೆ ನಾಯಕನಾಗಿದ್ದೀನಿ. ಬಿಎಸ್‌ವೈ ಭಯದಿಂದ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ವಿಜಯೇಂದ್ರಗೆ ಏನೂ ಗೊತ್ತಿಲ್ಲ. ಅವನು ಇನ್ನೂ ಸಣ್ಣ ಹುಡುಗ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನೊಟೀಸ್ ಸಂಬಂಧ ಯಾವ ನಾಯಕರನ್ನು ನಾನು ಭೇಟಿ ಮಾಡಲ್ಲ. ನನಗೆ ಬಂದಿರುವ ನೊಟೀಸ್ ನಕಲಿ ಎನಿಸುತ್ತಿದೆ ಎಂದು ಆರೋಪಿಸಿದರು.