ನವದೆಹಲಿ: ದಲಿತರು, ಹಿಂದುಳಿದವರು, ಆದಿವಾಸಿಗಳು ಸೇರಿದಂತೆ ಪ್ರತಿಯೊಂದು ಸಮುದಾಯದ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.
ಸಂಸತ್‍ನ ಜಂಟಿ ಅಧಿವೇಶನ ಉದ್ದೇಶಿಸಿ ಸುಮಾರು 1 ಗಂಟೆ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣದ ಕುರಿತು ಹಾಗೂ ನಕಲಿ ಸುದ್ದಿ ಹಬ್ಬಿಸಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬುದು ಕೇವಲ ಘೋಷಣೆಯಾಗಿ ಉಳಿದಿಲ್ಲ. 2014ರಲ್ಲಿ ದೇಶದ 25 ಕೋಟಿ ಜನರಿಗೆ ಸಾಮಾಜಿಕ ಭದ್ರತೆಯನ್ನು ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಒದಗಿಸಲಾಗಿತ್ತು. ಇದರ ಸಂಖ್ಯೆ ಈಗ 95 ಕೋಟಿಗೆ ಏರಿದೆ. ವಿಬಿ-ಜಿ ರಾಮ್ ಜಿ ಕಾನೂನಿನ ಮೂಲಕ ಗ್ರಾಮೀಣ ಭಾರತದ ಸವಾರ್ಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ವರ್ಷದಲ್ಲಿ 125 ದಿನಗಳು ಉದ್ಯೋಗ ಸೃಜನೆಯಾಗಲಿವೆ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ದೇಶವು ಸಾಧಿಸಿರುವ ಪ್ರಗತಿಯನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದ ರಾಷ್ಟ್ರಪತಿಗಳು, ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳ ಪರಿಣಾಮವಾಗಿ ಸುಮಾರು 25 ಕೋಟಿ ಜನರು ಬಡತನದ ರೇಖೆಯಿಂದ ಮೇಲೆ ಬಂದಿದ್ದಾರೆ ಎಂಬ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು. ಇದು ದೇಶದ ಆರ್ಥಿಕ ಸಬಲೀಕರಣದ ವೇಗಕ್ಕೆ ಸಾಕ್ಷಿಯಾಗಿದೆ ಎಂದ ಅವರು, ಮೂಲಸೌಕರ್ಯ, ಡಿಜಿಟಲೀಕರಣ, ಬ್ಯಾಂಕಿಂಗ್ ಸುಧಾರಣೆಗಳು ಹಾಗೂ ನೇರ ಲಾಭ ವರ್ಗಾವಣೆ ವ್ಯವಸ್ಥೆಗಳ ಮೂಲಕ ಸಾಮಾನ್ಯ ನಾಗರಿಕರ ಬದುಕಿನಲ್ಲಿ ಸಕಾರಾತಕ ಬದಲಾವಣೆಗಳು ಸಂಭವಿಸಿವೆ ಎಂದು ಅಭಿಪ್ರಾಯಪಟ್ಟರು.
ಭಾರತವು ಶೀಘ್ರದಲ್ಲೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮಲು ಸಜ್ಜಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಷ್ಟ್ರಪತಿ, ಮಹಿಳಾ ಸಬಲೀಕರಣದ ಕುರಿತಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶೇಷವಾಗಿ ಶ್ಲಾಘಿಸಿದರು. ದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಇನ್ನಷ್ಟು ಬಲವಾಗಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.





