ಚಂಡೀಘಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದೆಹಲಿ ಚಲೋ ನಡೆಸುತ್ತಿದ್ದ ನೂರಾರು ರೈತರ ಗುಂಪನ್ನು ತಡೆಯಲು ಪೊಲೀಸರು ಶಂಭು ಗಡಿಯಲ್ಲಿ ಅಶ್ರುವಾಯು ಶೆಲ್ ಪ್ರಯೋಗ ಮಾಡಿದ್ದಾರೆ.
ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದು, ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನೀವು ಮುಂದುವರಿಯಬೇಡಿ ಎಂದು ಪೊಲೀಸರು ರೈತರಿಗೆ ಹೇಳಿದ್ದಾರೆ.
ರೈತರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಹಾಗೂ ಕಬ್ಬಿಣದ ಮೆಶ್‌ಗಳನ್ನು ಅಳವಡಿಸಲಾಗಿದೆ.
ಶಂಭು ಗಡಿಯಿಂದ ಇಂದು ದೆಹಲಿಗೆ ಮೆರವಣಿಗೆ ಹೊರಟಿದ್ದ ರೈತರನ್ನು ಅನುಮತಿ ಪತ್ರ ತೋರಿಸುವಂತೆ ಕೇಳಿದ್ದಾರೆ.
ಗುರುತಿನ ಚೀಟಿ ನೀಡಲು ನಿರಾಕರಿಸಿದ ರೈತರು ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ ರೈತರನ್ನು ಚದುರಿಸಲು ಅಶ್ರುವಾಯು ಶೆಲ್ ಸಿಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಗುರುತಿನ ಚೀಟಿಗಳನ್ನು ನೀಡುತ್ತೇವೆ. ಆದರೆ ಅವರು ನಮಗೆ ದಿಲ್ಲಿಗೆ ಹೋಗಲು ಅನುಮತಿ ನೀಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





