ಚೆನ್ನೈ : ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಪ್ರತಿಸ್ಪರ್ಧಿ ಟಿವಿಕೆ ಪಕ್ಷದ ಮುಖ್ಯಸ್ಥರಾದ ವಿಜಯ್ ಅವರಿಂದು ನಾಮಪತ್ರ ಸಲ್ಲಿಸಿದ್ದಾರೆ.
ಹಾಲಿ ಸರ್ಕಾರದ ಅವಧಿ ಮೇ 10 ರಂದು ಮುಕ್ತಾಯಗೊಳ್ಳಲಿದೆ. ಹಾಗಾಗಿ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ 234 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಸಿಎಂ ಎಂ.ಕೆ ಸ್ಟಾಲಿನ್ ಅವರು 2011, 2016 ಮತ್ತು 2021 ರಲ್ಲಿ ಗೆದ್ದ ಕೊಲತ್ತೂರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಚೊಚ್ಚಲ ಚುನಾವಣೆ ಎದುರಿಸುತ್ತಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ವಿಜಯ್ ಚೆನ್ನೈನ ನಗರ ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧೆಗಿಳಿದಿದ್ದಾರೆ.
ಸ್ಟಾಲಿನ್ ಅದ್ಧೂರಿ ರೋಡ್ ಶೋ
ನಾಮಪತ್ರ ಸಲ್ಲಿಸಿದ ಬಳಿಕ ಅದ್ಧೂರಿ ರೋಡ್ ಶೋ ನಡೆಸಿದ ಎಂ.ಕೆ ಸ್ಟಾಲಿನ್ ಅವರು, ಮತ್ತೊಮ್ಮೆ ತಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಜನರ ಬೆಂಬಲ ಕೋರಿದರು. ಇದೇ ವೇಳೆ ತಮ್ಮ ಅವಧಿಯಲ್ಲಿ ಕೊಲತ್ತೂರ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಕುರಿತ ಡಿಎಂಕೆ ಸಾಧನೆಗಳ ಪುಸ್ತಕವನ್ನು ಅನಾವರಣಗೊಳಿಸಿದರು.
ವಿಜಯ್(ಟಿವಿಕೆ)ಗೆ ಚೊಚ್ಚಲ ಚುನಾವಣೆ
ಇನ್ನೂ ಚೊಚ್ಚಲ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್ ಚೆನ್ನೈನ ಪೆರಂಬೂರು ಮತ್ತು ತಿರುಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇಂದು ವ್ಯಾಸರ್ಪಾಡಿಯ ಡಾ. ಅಂಬೇಡ್ಕರ್ ಸರ್ಕಾರಿ ಕಲಾ ಕಾಲೇಜಿನಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಸಿಟಿಆರ್ ನಿರ್ಮಲ್ ಕುಮಾರ್ ಹಾಗೂ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.





