ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ ಅಧಿಕಾರಿಗಳು ಜಾಮೀನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಇದೀಗ ಸುಪ್ರೀಂಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿ ಭವಾನಿ ಅವರಿಗೆ ಬಿಗ್ ರಿಲೀಫ್ ನೀಡಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.
ಆತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಸಂತ್ರಸ್ಥೆಯ ಮಗ ನನ್ನ ತಾಯಿಯನ್ನು ಅಪಹರಣ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಬಳಿಕ ಈ ಕೇಸ್‌ಗೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಎಸ್‌ಐಟಿ ಅಧಿಕಾರಿಗಳು ಈ ಜಾಮೀನು ಅರ್ಜಿಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು.
ಎಸ್‌ಐಟಿ ಪರ ವಕೀಲರ ವಾದವೇನು?
ಭವಾನಿ ರೇವಣ್ಣ ಅವರು ಆರೋಪಿಯ ತಾಯಿ ಆಗಿದ್ದಾರೆ. ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಸೇರಿದ್ದವರಾಗಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಆರೋಪಿ ಮಹಿಳೆ ನೇರವಾದ ಸಂಬಂಧ ಹೊಂದಿದ್ದಾರೆ. ಹೀಗಾಗಿ ಭವಾನಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ಅನ್ನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದರು.
ಭವಾನಿ ಜಾಮೀನಿನ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಅಕ್ಟೋಬರ್.18) ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿ, ಈಗಾಗಲೇ ಪ್ರಕರಣದಲ್ಲಿ ಚಾರ್ಜ್‌ಶೀಟ್‌ನ್ನು ಸಲ್ಲಿಸಲಾಗಿದೆ. ಅಲ್ಲದೇ, ಪ್ರಕರಣದ ಪ್ರಮುಖ ಆರೋಪಿಗಳನ್ನು ವಿಚಾರಣೆ ನಡೆಸಿ ಬಂಧಿಸಲಾಗಿದೆ. ಈ ಪ್ರಕರಣದ ಹಂತದಲ್ಲಿ ಎಸ್‌ಐಟಿ ಅಧಿಕಾರಿಗಳಿಂದ ಎಲ್ಲಿಯಾದರೂ ತನಿಖೆ ದಾರಿ ತಪ್ಪಿದೆಯಾ? ಒಂದು ವೇಳೆ ತಪ್ಪಿದ್ದರೆ ನಾವು ಆ ಸಂದರ್ಭದಲ್ಲಿ ಮಾತ್ರ ನಿಮ್ಮ ನೆರವಿಗೆ ಬರಬಹುದು. ಆದರೆ ಇಲ್ಲಿ ಯಾವ ಘಟನೆಯೂ ಆ ರೀತಿ ನಡೆದಿಲ್ಲ. ಕೆಲ ರಾಜಕಾರಣಿಗಳು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಕೇವಲ ರಾಜಕೀಯ ಪ್ರತಿಷ್ಠಿತ ರಾಜಕೀಯ ಕುಟುಂಬ ಎಂದು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ.