ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ತಿಳಿವಳಿಕೆ ಪತ್ರಗಳಿಗೆ ಸಹಿ
ವಿಶೇಷ ಉಕ್ಕು ಸ್ವಾವಲಂಬನೆಗೆ ದೊಡ್ಡ ಹೆಜ್ಜೆ ಇರಿಸಿದ ಕೇಂದ್ರ ಸರಕಾರ
PLI 1.1 ಎರಡನೇ ಸುತ್ತಿನಲ್ಲಿ ₹17,000 ಕೋಟಿ ಹೂಡಿಕೆ
ನವದೆಹಲಿ: ಉಕ್ಕು ಕ್ಷೇತ್ರದಲ್ಲಿ ವಿಶೇಷ ಉಕ್ಕು (ಸ್ಪೆಶಾಲಿಟಿ ಸ್ಟೀಲ್) ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಉಕ್ಕು ಸಚಿವಾಲಯವು ಉತ್ಪಾದನಾ ಸಂಪರ್ಕ ಉತ್ತೇಜನಾ ಯೋಜನೆ 1.1ರ (PLI 1.1) ಅಡಿಯಲ್ಲಿ 42 ಒಪ್ಪಂದಗಳಿಗೆ (ಎಂಒಯು) ಸಹಿ ಹಾಕುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ. ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ನವದೆಹಲಿಯಲ್ಲಿ ಸೋಮವಾರದಂದು ವಿಜ್ಞಾನ ಭವನದಲ್ಲಿ ಉಕ್ಕು ಉತ್ಪಾದಕ ಕಂಪನಿಗಳ ಜತೆ ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಯೋಜನೆಯು ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಪರಿಕಲ್ಪನೆಗಳ ಗುರಿಯನ್ನು ಸಾಧಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಒತ್ತಿ ಹೇಳಿದರು.
“ಉಕ್ಕು ಕ್ಷೇತ್ರದಲ್ಲಿ ಸ್ವಾವಲಂಭನೆ ಸಾಧಿಸಬೇಕು ಎನ್ನುವ ಪ್ರಧಾನಿಗಳ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪಿಎಲ್ಐ ಯೋಜನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತವು ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ಮತ್ತು ಬಳಕೆದಾರ ರಾಷ್ಟ್ರವಾಗಿದೆ. ಆದರೂ ನಾವು ಇನ್ನೂ ಕೆಲವು ಉನ್ನತ ದರ್ಜೆಯ ಉಕ್ಕನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಈ ಯೋಜನೆಯು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಆ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ” ಎಂದು ಅವರು ಹೇಳಿದರು.
ಜುಲೈ 2021ರಲ್ಲಿ ಪ್ರಾರಂಭವಾದ ವಿಶೇಷ ಉಕ್ಕು ಉತ್ತೇಜನಕ್ಕಾಗಿ PLI ಯೋಜನೆಯು ಐದು ವಿಶಾಲ ವರ್ಗಗಳು ಮತ್ತು 19 ಉಪ-ವರ್ಗಗಳನ್ನು ಒಳಗೊಂಡಿದೆ. ಈ ಉತ್ತೇಜನಕ್ಕೆ ಭಾರತದಲ್ಲಿ ನೋಂದಾಯಿಸಲ್ಪಟ್ಟ ಮತ್ತು ಸಂಪೂರ್ಣ ಉಕ್ಕಿನ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳು ಮಾತ್ರ ಅರ್ಹವಾಗಿವೆ. ಈ ಯೋಜನೆಯಲ್ಲಿ ಹೆಚ್ಚು ಖಾಸಗಿ ಪಾಲುದಾರರು ಭಾಗಿಯಾಗಬೇಕು. ಅದರಂತೆಯೇ ನಮ್ಮ ನಿರೀಕ್ಷೆಗೂ ಮೀರಿ ನೋಂದಣಿ ಪ್ರಕ್ರಿಯೆ ನಡೆಸಿದೆ. ಹೀಗಾಗಿ ಸರ್ಕಾರವು 2ನೇ ಸುತ್ತಿನ ಉತ್ತೇಜನಾ ಯೋಜನೆ ಆರಂಭಿಸಲು ಉತ್ಸಾಹ ತುಂಬಿತು ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಉಕ್ಕು ವಲಯದಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಹೂಡಿಕೆ ಮತ್ತು ಉತ್ಪಾದನಾ ಗುರಿಗಳ ಆಧಾರದ ಮೇಲೆ 3-4% ವರೆಗಿನ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಮೊದಲ ಸುತ್ತಿನಲ್ಲಿ 23 ಕಂಪನಿಗಳು 44 ಅರ್ಜಿಗಳನ್ನು ಸಲ್ಲಿಸಿದ್ದವು. ಒಂದು ಯೋಜನೆಗೆ ಈಗಾಗಲೇ ಪ್ರೋತ್ಸಾಹ ಧನ ವಿತರಿಸಲಾಗಿದೆ. ಎರಡನೇ ಸುತ್ತಿನಲ್ಲಿ ಇನ್ನೂ ಹೆಚ್ಚಿನ ಉತ್ಸಾಹ ನೀಡಲಿದ್ದು, 25 ಕಂಪನಿಗಳು 42 ಅರ್ಜಿಗಳನ್ನು ಸಲ್ಲಿಸಿ, ₹17,000 ಕೋಟಿ ಮೌಲ್ಯದ ಹೂಡಿಕೆಗೆ ಅರ್ಹವಾಗಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
PLI 1.1 ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಉಕ್ಕು ಸಚಿವಾಲಯದ ಅಧಿಕಾರಿಗಳು ಮತ್ತು ಮೆಕಾನ್ (MECON) ತಂಡದ ಪ್ರಯತ್ನಗಳನ್ನು ಶ್ಲಾಘಿಸಿದ ಸಚಿವರು ಅವರು, “ಸಚಿವಾಲಯದ ಅಧಿಕಾರಿಗಳು ಮತ್ತು MECON ತಂಡವು ತೋರಿಸಿದ ದಕ್ಷತೆಯು ಈ ಯೋಜನೆಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಉಪಕ್ರಮದ ಯಶಸ್ಸನ್ನು ಖಚಿತಪಡಿಸಿಕೊಳ್ಳುವಲ್ಲಿ ಅವರ ಪ್ರಯತ್ನಗಳು ನಿರ್ಣಾಯಕವಾಗಿದ್ದವು ಎಂದರು.
“ದೇಶೀಯವಾಗಿ ನಾವು ವಿಶೇಷ ಉಕ್ಕನ್ನು (ಸ್ಪೆಶಾಲಿಟಿ ಸ್ಟೀಲ್ ) ಉತ್ಪಾದಿಸುತ್ತಿಲ್ಲ, ಆದರೆ ನಮ್ಮ ಉಕ್ಕು ತಯಾರಕರು ವಿಶೇಷ ಉಕ್ಕು ಸ್ಥಾವರಗಳಲ್ಲಿ ಹೂಡಿಕೆ ಮಾಡುವಂತೆ ನಾನು ವೈಯಕ್ತಿಕವಾಗಿ ವಿನಂತಿಸುತ್ತೇನೆ. ನೀವು ದೇಶೀಯವಾಗಿ ವಿಶೇಷ ಉಕ್ಕನ್ನು ಉತ್ಪಾದಿಸುವಲ್ಲಿ ಯಶಸ್ವಿಯಾದರೆ, ಅದು ದೇಶದಲ್ಲಿ ಸಾಮರ್ಥ್ಯ ಮತ್ತು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಸವಾಲನ್ನು ಸ್ವೀಕರಿಸಲು ಮತ್ತು ನಮ್ಮ ಸ್ವಾವಲಂಬನೆಗೆ ಕೊಡುಗೆ ನೀಡಲು ಎಲ್ಲಾ ಪಾಲುದಾರರನ್ನು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.
ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂದ್ರಿಕ್, ಜಂಟಿ ಕಾರ್ಯದರ್ಶಿ ಅಭಿಜಿತ್ ನರೇಂದ್ರ, ಮಕಾನ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ.ವರ್ಮಾ ಮುಂತಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





