ಲಡಾಖ್: ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ ಬಳಿ ಇಂದು ಭಾರೀ ದುರ್ಘಟನೆಯೊಂದು ಜರುಗಿದೆ.
ಇಂದು ಮುಂಜಾನೆ ಲಡಾಖ್‌ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ ಬಳಿ ಟಿ-72 ಟ್ಯಾಂಕ್‌ನಲ್ಲಿ ನದಿಯೊಂದನ್ನು ದಾಟುತ್ತಿದ್ದಾಗ ಹಠಾತ್ ಪ್ರವಾಹ ಉಂಟಾಗಿದ್ದು, ಐವರು ಯೋಧರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೇಹ್‌ನಿಂದ 148 ಕಿ.ಮೀ ದೂರದಲ್ಲಿರುವ ಮಂದಿರ್ ಮೋರ್ ಬಳಿ ಬೆಳಿಗ್ಗೆ ೧ ಗಂಟೆ ಸುಮಾರಿಗೆ ಟ್ಯಾಂಕ್‌ನೊಂದಿಗೆ ನದಿಯನ್ನು ದಾಟುವ ಅಭ್ಯಾಸ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸೇನಾ ಟ್ಯಾಂಕ್ ಅಪಘಾತಕ್ಕೀಡಾಗಿದ್ದು, ನದಿಯ ಆಳವಾದ ಭಾಗವನ್ನು ದಾಟುತ್ತಿದ್ದಾಗ ಸಿಲುಕಿಕೊಂಡಿತ್ತು. ಈ ವೇಳೆ ಏಕಾಏಕಿ ನೀರಿನ ಮಟ್ಟ ಏರಿದ್ದರಿಂದ ಸೈನಿಕರು ಕೊಚ್ಚಿಕೊಂಡು ಹೋಗಿದ್ದಾರೆ.
ಭಾರತದಲ್ಲಿ 2400 ಟಿ-72 ಟ್ಯಾಂಕ್‌ಗಳಿವೆ. ಭಾರತೀಯ ಸೇನೆಯು ಈ ಟ್ಯಾಂಕ್‌ಗಳನ್ನು ಬಹಳ ಹಿಂದಿನಿಂದಲೂ ಬಳಸುತ್ತಿದೆ. ಅಪಘಾತದ ಸಮಯದಲ್ಲಿ ಇತರ ಟ್ಯಾಂಕ್‌ಗಳು ಸಹ ಅಲ್ಲಿದ್ದವು. ಎಲ್ಲಾ ಐದು ಸೈನಿಕರ ಶವಗಳನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಿಮ ಕರಗುವಿಕೆಯಿಂದ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಎಂದು ಊಹಿಸಲಾಗಿದ್ದು, ಶ್ಯೋಕ್ ಸಿಂಧೂ ನದಿಯ ಉಪನದಿಯಾಗಿದೆ.
ಘಟನೆ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಲಡಾಖ್‌ನಲ್ಲಿ ನದಿ ದಾಟುವಾಗ ಸಂಭವಿಸಿದ ಅಪಘಾತದಲ್ಲಿ ನಮ್ಮ ಐವರು ಧೈರ್ಯಶಾಲಿ ಸೈನಿಕರು ಪ್ರಾಣ ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ನಮ್ಮ ಸೈನಿಕರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.