Mysore
33
few clouds

Social Media

ಭಾನುವಾರ, 08 ಮಾರ್ಚ್ 2026
Light
Dark

ಹಾವು ಕಡಿತ ಇನ್ನು ಘೋಷಿತ ಕಾಯಿಲೆ: ಕೇಂದ್ರ ಸರ್ಕಾರ

ಹೊಸದಿಲ್ಲಿ: ದೇಶದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಹಾವು ಕಡಿತವನ್ನು ಕಾಯಿಲೆ ಎಂದು ಘೋಷಣೆ ಮಾಡಿದೆ.

ಕೇಂದ್ರ ಸರ್ಕಾರ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಹಾವು ಕಡಿತ ಹಾಗೂ ಅದರಿಂದಾಗುವ ಸಾವಿನ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಇನ್ನು ಮುಂದೆ ಎಲ್ಲ ಆರೋಗ್ಯ ಕೇಂದ್ರಗಳು ಹಾವು ಕಡಿತ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಯನ್ನು ನಮೂದಿಸಬೇಕು ಎಂದು ಆದೇಶ ಹೊರಡಿಸಿದೆ.

ಹಾವು ಕಡಿತವು ಸಾರ್ವಜನಿಕ ಆರೋಗ್ಯದ ಕಾಳಜಿಯ ವಿಷಯವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಅದು ಮರಣ, ರೋಗ ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ. 2030ರ ವೇಳೆಗೆ ಭಾರತದಲ್ಲಿ ಹಾವು ಕಡಿತದ ತಡೆಗಟ್ಟುವಿಕೆ ಮತ್ತು ಸೂಕ್ತ ಔಷಧ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿದೆ. 2030ರ ವೇಳೆಗೆ ಹಾವು ಕಡಿತ ಸಂಬಂಧಿತ ಸಾವುಗಳನ್ನು ಅರ್ಧದಷ್ಟು ಕಡಿಮೆ ಮಾಡುವುದು ಕ್ರಿಯಾ ಯೋಜನೆಯ ಉದ್ದೇಶ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.

ಗ್ರಾಮೀಣ ಪ್ರದೇಶ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಹಾವು ಕಡಿತದ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದ್ದು, ಹಲವರು ಹಾವು ಕಡಿತಕ್ಕೊಳಗಾಗಿ ಮೃತ ಪಟ್ಟಿದ್ದಾರೆ. ಈಗಾಗಲೇ ಹಲವಾರು ರಾಜ್ಯಗಳು ಹಾವು ಕಡಿತವನ್ನು ಕಾಯಿಲೆ ಎಂದು ಘೋಷಿಸಿವೆ. ಅದರಲ್ಲಿ ದೇಶದಲ್ಲಿ ಹಾವು ಕಡಿತವನ್ನು ಕಾಯಿಲೆ ಎಂದು ಘೋಷಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.

Tags:
error: Content is protected !!