ವಾಷಿಂಗ್ಟನ್: ಅಮೇರಿಕಾದಾದ್ಯಂತ ಬೀಸುತ್ತಿರುವ ಭೀಕರ ಹಿಮಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಹಿಮಪಾತ ಹಾಗೂ ಮೈಕೊರೆಯುವ ಚಳಿಗೆ ಇದುವರೆಗೆ ಸುಮಾರು 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಟೆಕ್ಸಾಸ್, ಲೂಯಿಸಿಯಾನ ಹಾಗೂ ನ್ಯೂಯಾರ್ಕ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾವುಗಳು ಸಂಭವಿಸಿದೆ. ಭಾರೀ ಹಿಮಪಾತ ಹಾಗೂ ಬಿರುಗಾಳಿಯಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಗ್ರಾಹಕರು ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಸುಮಾರು 30,000ಕ್ಕೂ ಹೆಚ್ಚು ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರಿದ್ದು, ಸಾವಿರಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಇನ್ನು ನ್ಯೂಯಾರ್ಕ್, ಬೋಸ್ಟನ್ ಮತ್ತು ಫಿಲಡೆಲ್ಟಿಯಾದಂತಹ ಪ್ರಮುಖ ನಗರಗಳಲ್ಲಿ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದ್ದು, ಆನ್‌ಲೈನ್ ತರಗತಿಗಳಿಗೆ ಸೂಚನೆ ನೀಡಲಾಗಿದೆ.





