ಹೈದರಾಬಾದ್: ಡಿಸೆಂಬರ್.4ರಂದು ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ದುರದೃಷ್ಟಕರ ಎಂದು ನಟ ಅಲ್ಲು ಅರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೈದರಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಧ್ಯಾ ಥಿಯೇಟರ್ ಬಳಿ ಕಾಲ್ತುಳಿತ ಆಕಸ್ಮಿಕವಾಗಿ ಸಂಭವಿಸಿದೆ. ಇದಕ್ಕೆ ಯಾರೂ ಕೂಡ ಕಾರಣರಲ್ಲ.
ಜನರಿಗೆ ಮನರಂಜನೆ ನೀಡುವುದೇ ನನ್ನ ಜೀವನದ ಉದ್ದೇಶ. ಮಹಿಳೆ ಮೃತಪಟ್ಟ ವಿಷಯ ನನಗೆ ಬೆಳಿಗ್ಗೆಯವರೆಗೂ ಗೊತ್ತಿರಲಿಲ್ಲ. ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ವಿಷಯ ತಿಳಿದಾಗ ನನಗೆ ತುಂಬಾ ಶಾಕ್ ಆಯಿತು. ಆ ಶಾಕ್‌ನಿಂದ ನಾನು ಈಗಲೂ ಹೊರ ಬಂದಿಲ್ಲ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಮಹಿಳೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪುಷ್ಪ ಸಿನಿಮಾ ವಿಜಯೋತ್ಸವವನ್ನು ರದ್ದು ಮಾಡಿದ್ದೇವೆ. ಸಿಎಂ ರೇವಂತ್ ರೆಡ್ಡಿ ಅವರ ಹೇಳಿಕೆಯಿಂದ ನನಗೆ ತುಂಬಾ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೃತ ಮಹಿಳೆಯ ಕುಟುಂಬಕ್ಕೆ ನನ್ನ ಸಂತಾಪಗಳು. ಆಸ್ಪತ್ರೆಗೆ ದಾಖಲಿಸಿದ ಮಗುವಿನ ಸ್ಥಿತಿಯ ಬಗ್ಗೆ ಪ್ರತಿ ಗಂಟೆಗೆ ಅಪ್ ಡೇಟ್ ತೆಗೆದುಕೊಳ್ಳುತ್ತಿದ್ದೇನೆ. ಅವರ ಸ್ಥಿತಿ ಸುಧಾರಿಸುತ್ತಿದೆ. ಈ ಬಗ್ಗೆ ಜನರಿಗೆ ಸಾಕಷ್ಟು ತಪ್ಪು ಮಾಹಿತಿ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾನು ಯಾವುದೇ ಇಲಾಖೆ ಹಾಗೂ ರಾಜಕಾರಣಿಯನ್ನು ದೂಷಿಸಲು ಬಯಸುವುದಿಲ್ಲ ಎಂದು ಹೇಳಿದರು.