ಪಾಲಕ್ಕಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸುವಂತೆ ಜಾತಿ ಗಣತಿ ವಿಚಾರವಾಗಿ ಆರ್‌ಎಸ್‌ಎಸ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಜಾತಿ ಆಧಾರಿತ ಗಣತಿಗೆ ಆರ್‌ಎಸ್‌ಎಸ್ ಬೆಂಬಲ ಸೂಚಿಸಿದೆ.
ಕೇರಳದ ಪಾಲಕ್ಕಾಡ್ ನಲ್ಲಿ ನಡೆದ ʻಸಮನ್ವೇ ಬೈಠಕ್ʼ ಎಂಬ ಮೂರು ದಿನಗಳ ಸಮನ್ವಯ ಸಮಾವೇಶದ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್, ಜಾತಿ ಆಧಾರತಿಯ ಗಣತಿಗೆ ಬೆಂಬಲವಿದೆ. ಆದರೆ, ಇದು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕೇ ವಿನಾ, ಚುನಾವಣಾ ಲಾಭಕ್ಕಾಗಿ ದುರ್ಬಳಕೆಯಾಗಬಾರದು ಎಂದು ಹೇಳಿದ್ದಾರೆ.
ಮುಂದುವರೆದು, ಜಾತಿ ಗಣತಿ ಬಹಳ ಸೂಕ್ಷ್ಮ ಸಂಗತಿ. ಹಿಂದೂ ಸಮಾಜದಲ್ಲಿ ನಾವು ಜಾತಿ ಹಾಗೂ ಜಾತಿ ಸಂಬಂಧಗಳ ಸೂಕ್ಷ್ಮ ಸಂಗತಿ ಹೊಂದಿದ್ದೇವೆ. ಹಾಗೆಯೇ ಇದು ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಮುಖ್ಯವಾಗಿದೆ. ಇದನ್ನು ಬಹಳ ಗಂಭೀರವಾಗಿ ನಿಭಾಯಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸರ್ಕಾರಕ್ಕೆ ಅಂಕಿ ಅಂಶಗಳು ಅಗತ್ಯವಾಗಿರುತ್ತದೆ. ಈ ಹಿಂದೆಯೂ ಇಂತಹ ಚಟುವಟಿಕೆಗಳನ್ನು ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಪರಿಣಾಮಕಾರಿ ನೀತಿ ನಿರೂಪಣೆಗಾಗಿ ಜಾತಿ ಗಣತಿಯನ್ನು ನಡೆಸಲು ಬಯಸುತ್ತಿರುವ ಕಾಂಗ್ರೆಸ್, ಸಮಾಜವಾಗಿ ಪಕ್ಷ ಮತ್ತು ಇತರ ಇಂಡಿಯಾ ಒಕ್ಕೂಟ ಮಿತ್ರಪಕ್ಷಗಳ ಒತ್ತಾಯದ ನಡುವೆ ಸುನೀಲ್ ಅಂಬೇಕರ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.