ಪಾಟ್ನಾ : ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ನರೇಂದ್ರಮೋದಿ ಸರ್ಕಾರ ಹೈಜಾಕ್ ಮಾಡುತ್ತಿದೆ ಎಂದು ಆರೋಪಿಸಿರುವ ಆರ್.ಜೆ.ಡಿ ನಾಯಕ ತೇಜಸ್ವಿ ಯಾದವ್ ಚುನಾವಣೆ ದಿನಾಂಕಗಳನ್ನು ಘೋಷಿಸುವ ಮೊದಲೇ ಆಡಳಿತಾರೂಢ ಬಿಜೆಪಿ ಚುನಾವಣಾ ವೇಳಾಪಟ್ಟಿಗಳ ಬಗ್ಗೆ ತಿಳಿದಿರುತ್ತದೆ ಎಂದು ದೂರಿದ್ದಾರೆ.
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‍ಡಿಎ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಹೈಜಾಕ್ ಮಾಡಲಾಗಿದೆ ಎಂಬ ಅಂಶವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಚುನಾವಣಾ ಆಯೋಗವು ಅವುಗಳನ್ನು ಘೋಷಿಸುವ ಮೊದಲೇ ಬಿಜೆಪಿಯ ಐಟಿ ಸೆಲ್ ಚುನಾವಣಾ ದಿನಾಂಕಗಳನ್ನು ತಿಳಿದುಕೊಳ್ಳುವುದು ಆಶ್ಚರ್ಯಕರವಾಗಿದೆ. ನಾವು ಬೆಳವಣಿಗೆಗಳ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ಯಾದವ್ ತಿಳಿಸಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕಾಗಿದೆ, ಪ್ರಭಾವಿತರಾದರೆ ಜನರು ನ್ಯಾಯವನ್ನು ಹೇಗೆ ನಿರೀಕ್ಷಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ 2020 ರ ವಿಧಾನಸಭಾ ಚುನಾವಣೆಯಲ್ಲಿ ಏನಾಯಿತು ಎಂದು ಜನರಿಗೆ ತಿಳಿದಿದೆ. ನಾವು ಸರ್ಕಾರ ರಚಿಸಬೇಕಾಗಿತ್ತು. ಸಂಜೆ ಎಣಿಕೆಯನ್ನು ಏಕೆ ನಿಲ್ಲಿಸಲಾಯಿತು ಎಂಬುದನ್ನು ಸಮರ್ಥಿಸಲು ಚುನಾವಣಾ ಆಯೋಗ ಮೂರು ಪತ್ರಿಕಾಗೋಷ್ಠಿಗಳನ್ನು ನಡೆಸಿತ್ತು. ಆದರೆ ರಾತ್ರಿಯಲ್ಲಿ ಅದು ಏಕೆ ಪುನರಾರಂಭವಾಯಿತು? ವಿಜೇತರೆಂದು ಘೋಷಿಸಲ್ಪಟ್ಟ ಮಹಾಘಟಬಂಧನ್ ಅಭ್ಯರ್ಥಿಗಳನ್ನು ನಂತರ ಸೋತವರು ಎಂದು ಘೋಷಿಸಲಾಯಿತು ಎಂದು ಯಾದವ್ ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ 2024ರ ಮಹಾರಾಷ್ಟ್ರ ಚುನಾವಣೆಯಲ್ಲಿ ರಿಗ್ಗಿಂಗ್ ನಡೆದಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದರು ಮತ್ತು ಇದು ಮುಂದೆ ಬಿಹಾರ ಚುನಾವಣೆಯಲ್ಲಿ ಮತ್ತು ಬಿಜೆಪಿ ಸೋತಿರುವ ಎಲ್ಲೆಡೆ ನಡೆಯುತ್ತದೆ ಎಂದು ಹೇಳಿದ್ದರು.
2020ರಲ್ಲಿ ನಡೆದ ಕೊನೆಯ ರಾಜ್ಯ ವಿಧಾನಸಭಾ ಚುನಾವಣೆಗಳು ನ್ಯಾಯಯುತವಾಗಿ ನಡೆದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹೇಳಿಕೆ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ರಿಗ್ಗಿಂಗ್ ನಡೆದಿದೆ ಎಂಬ ಕಾಂಗ್ರೆಸ್‍ನ ರಾಹುಲ್ ಗಾಂಧಿ ಹೇಳಿಕೆಗಳನ್ನು ಬೆಂಬಲಿಸಿ ಯಾದವ್ ಈ ಆರೋಪ ಮಾಡಿದ್ದಾರೆ.





