Mysore
20
few clouds

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ

kailasa manasa sarovara yatra resumption

 

ನವದೆಹಲಿ: ಕೊರೊನಾ ವೈರಸ್ ಪರಿಣಾಮದಿಂದಾಗಿ ಸರಿಸುಮಾರು ಕಳೆದ ಐದು ವರ್ಷಗಳಿಂದ ನಿಂತು ಹೋಗಿದ್ದ ಕೈಲಾಸ ಮಾನಸ ಸರೋವರ ಯಾತ್ರೆ ಇದೀಗ ಮತ್ತೆ ಜೂನ್.30 ರಿಂದ ಪುನರಾರಂಭವಾಗಲಿದೆ.

ಉತ್ತರಾಖಂಡ ಸರ್ಕಾರ ಮತ್ತು ಭಾರತೀಯ ವಿದೇಶಾಂಗ ಸಚಿವಾಲಯದ ಆಶ್ರಯದಲ್ಲಿ ಯಾತ್ರೆಯ ಕುರಿತು ನಡೆದ ಸಭೆಯಲ್ಲಿ, ತೀರ್ಥಯಾತ್ರೆಯನ್ನು ಪುನರಾರಂಭಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

ಕೈಲಾಸ ಮಾನಸ ಸರೋವರ ಯಾತ್ರೆಯು ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ 17,000 ಅಡಿ ಎತ್ತರದಲ್ಲಿರುವ ಲಿಪುಲೇಖ್ ಪಾಸ್ ಮೂಲಕ ಹಾದು ಹೋಗಲಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸ ಪರ್ವತವು ಶಿವನ ವಾಸಸ್ಥಾನವಾಗಿದ್ದು, ಅದನ್ನು ಪ್ರದಕ್ಷಿಣೆ ಹಾಕಿ ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.

ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಈ ಯಾತ್ರೆಯನ್ನು 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಅಂದಿನಿಂದ ಅದನ್ನು ನಡೆಸಲು ಸಾಧ್ಯವಾಗಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಪ್ರಯತ್ನದಿಂದಾಗಿ ಈ ವರ್ಷ ಯಾತ್ರೆ ಪುನರಾರಂಭಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಜೂನ್.30ರಂದು ದೆಹಲಿಯಿಂದ ಯಾತ್ರೆ ಪ್ರಾರಂಭವಾಗಲಿದ್ದು, ತಲಾ 50 ಜನರ ಐದು ಗುಂಪುಗಳಿದ್ದು, ಒಟ್ಟು 250 ಭಕ್ತರು ಭಾಗವಹಿಸಲಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆಯ ಮೊದಲ ಗುಂಪು ಜುಲೈ.10 ರಂದು ಲಿಪುಲೇಖ್ ಪಾಸ್ ಮೂಲಕ ಚೀನಾವನ್ನು ಪ್ರವೇಶಿಸಲಿದ್ದು, ಕೊನೆಯ ಗುಂಪು ಆಗಸ್ಟ್.22ರಂದು ಚೀನಾದಿಂದ ಭಾರತಕ್ಕೆ ತೆರಳಲಿದೆ.

ಪ್ರತಿ ತಂಡವು ದೆಹಲಿಯಿಂದ ಹೊರಟು ಉತ್ತರಾಖಂಡದ ಚಂಪಾವತ್ ಜಿಲ್ಲೆಯ ತನಕಪುರದಲ್ಲಿ ಒಂದು ರಾತ್ರಿ, ಪಿಥೋರಗಢ ಜಿಲ್ಲೆಯ ಧಾರ್ಚುಲಾದಲ್ಲಿ ಒಂದು ರಾತ್ರಿ, ಗುಂಜಿಯಲ್ಲಿ ಎರಡು ರಾತ್ರಿ ಮತ್ತು ನಭಿದಂಗ್‍ನಲ್ಲಿ ಎರಡು ರಾತ್ರಿ ತಂಗುವ ಮೂಲಕ ಚೀನಾದ ತಕ್ಲಕೋಟ್‍ಗೆ ಪ್ರವೇಶಿಸಲಿದೆ.

ಕೈಲಾಸಕ್ಕೆ ಭೇಟಿ ನೀಡಿದ ನಂತರ, ಪ್ರಯಾಣಿಕರು ಚೀನಾದಿಂದ ಹೊರಟು ಪಿಥೋರಗಢ ಜಿಲ್ಲೆಯ ಬುಂಡಿಯಲ್ಲಿ ಒಂದು ರಾತ್ರಿ, ಚೌಕೋರಿಯಲ್ಲಿ ಒಂದು ರಾತ್ರಿ ಮತ್ತು ಅಲ್ಮೋರಾದಲ್ಲಿ ಒಂದು ರಾತ್ರಿ ತಂಗುವ ಮೂಲಕ ದೆಹಲಿ ತಲುಪಲಿದ್ದಾರೆ. ಹೀಗಾಗಿ, ಪ್ರತಿ ತಂಡವು ಒಟ್ಟು 22 ದಿನಗಳವರೆಗೆ ಪ್ರಯಾಣಿಸುತ್ತದೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುವ ಎಲ್ಲಾ ಯಾತ್ರಿಕರ ಆರೋಗ್ಯ ತಪಾಸಣೆಯನ್ನು ಮೊದಲು ದೆಹಲಿಯಲ್ಲಿ ಮತ್ತು ನಂತರ ಗುಂಜಿಯಲ್ಲಿ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!