ಇಸ್ಲಮಾಬಾದ್ : ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ರಿಪಬ್ಲಿಕ್ ಆಫ್ ಬಲೂಚಿಸ್ತಾನ್ ರಚನೆಗೊಂಡಿದೆ ಎಂದು ಬಲೂಚಿಸ್ತಾನ ನಾಯಕ ಮೀರ್ ಯಾರ್ ಸೇರಿದಂತೆ ಕೆಲ ನಾಯಕರು ಎಕ್ಸ್‌ನಲ್ಲಿ ಘೋಷಿಸಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ಪ್ರದೇಶದಲ್ಲಿ ದಶಕಗಳ ಹಿಂಸಾಚಾರ, ಬಲವಂತದ ಕಣ್ಮರೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ತುಮ್ ಮಾರೋಗೆ ಹಮ್ ನೆಕ್ಲೆಂಗಿ, ಹಮ್ ನಸಲ್ ಬಚಾನಿ ನೆಕ್ಲಿ ಹೈ, ಆವೋ ಹಮಾರಾ ಸಾಥ್ ದೋ ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನ್‍ನಾದ್ಯಂತ ಸಾರ್ವಜನಿಕರು ಬೀದಿಗಿಳಿದಿದ್ದಾರೆ. ಇದು ಬಲೂಚಿಸ್ತಾನ್ ಪಾಕಿಸ್ತಾನವಲ್ಲ. ಜಗತ್ತು ಇನ್ನು ಮುಂದೆ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ. ಭಾರತೀಯ ನಾಗರಿಕರು, ವಿಶೇಷವಾಗಿ ಮಾಧ್ಯಮಗಳು, ಯೂಟ್ಯೂಬರ್‍ಗಳು ಮತ್ತು ಬುದ್ಧಿಜೀವಿಗಳು ಬಲೂಚಿಸ್ತಾನ್‍ಗಳನ್ನು ಪಾಕಿಸ್ತಾನದ ಸ್ವಂತ ಜನರು ಎಂದು ಕರೆಯುವುದನ್ನು ನಿಲ್ಲಿಸುವಂತೆ ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಅವರು ಹೇ ನಾ-ಪಾಕಿಸ್ತಾನ್. ನಿಮ್ಮ ಬಳಿ ಸೈನ್ಯವಿದ್ದರೆ, ನಾವು ಬಲೂಚ್‍ನ ಸ್ವತಂತ್ರ ಯೋಧರಿದ್ದಾರೆ. ಈ ಯೋಧರು ನಿಮ್ಮ ವಿರುದ್ಧ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆಯ ಬರಹ ಪೋಸ್ಟ್ ಮಾಡಿದ್ದಾರೆ. ಇತ್ತೀಚಿನ ಗಡಿಯಾಚೆಗಿನ ಮಿಲಿಟರಿ ಕಾರ್ಯಾಚರಣೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾದ ನಡುವೆ ಈ ಘೋಷಣೆ ಬಂದಿದೆ.
ಅಲ್ಲದೇ ಹೊಸದಿಲ್ಲಿಯಲ್ಲಿ ಬಲೂಚಿಸ್ತಾನದ ರಾಯಭಾರ ಕಚೇರಿಗೆ ಅವಕಾಶ ನೀಡುವಂತೆ ಅವರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಾಕಿಸ್ತಾನಿ ಸೈನ್ಯವನ್ನು ಬಲೂಚಿಸ್ತಾನದಿಂದ ಕಳುಹಿಸಿ, ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ.





