ಆಂಧ್ರಪ್ರದೇಶ: ಸೋಮವಾರ(ಮೇ.೧೩) ಆಂಧ್ರಪ್ರದೇಶದಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಮತದಾನವಾಗಿದೆ.
ಒಟ್ಟು ಶೇ.೮೧.೮೬ ಮತದಾನ ದಾಖಲಾಗಿದ್ದು, ಇದು ಆಂಧ್ರಪ್ರದೇಶದಲ್ಲಿ ನಡೆದ ಚುನಾವಣೆಯಲ್ಲೇ ಅತಿ ಹೆಚ್ಚು ದಾಖಲೆಯ ಮತದಾನ ಇದಾಗಿದೆ. ೨೦೧೪ರಲ್ಲಿ ಶೇ.೭೮.೪೧ ಹಾಗೂ ೨೦೧೯ ರಲ್ಲಿ ೭೯.೭೭ ಮತದಾನ ನಡೆದಿತ್ತು. ೨೦೨೪ನೇ ಸಾಲಿನಲ್ಲಿ ಶೇ ೮೦ರ ಗಡಿ ದಾಟಿದೆ.
ಪ್ರಸಕ್ತ ಚುನಾವಣೆಯಲ್ಲಿ ಇವಿಎಂ ಮೂಲಕ ಶೇ.೮೦.೬೬ ಹಾಗೂ ಅಂಚೆ ಮೂಲಕ ಶೇ.೧.೨ ಮತದಾನ ನಡೆದಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಲೋಕಸಭೆಯ ೨೫, ವಿಧಾನಸಭೆಯ ೧೭೫ ಸ್ಥಾನಗಳಿಗೆ ಮತದಾನ ನಡೆದಿತ್ತು. ಒಟ್ಟು ೪.೧೩ ಕೋಟಿ ಮತದಾರರಲ್ಲಿ ೩.೩೩ಕೋಟಿ ಜನರು ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ.