ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರದಲ್ಲಿ 25 ಬೇಸಿಸ್‌ಗಳಷ್ಟು ಕಡಿತಗೊಳಿಸಿ, ಅದನ್ನು ಶೇ.6ಕ್ಕೆ ಇಳಿಸಿದೆ.
ಬ್ಯಾಂಕ್‌ಗಳಿಗೆ ಸಾಲದ ವೆಚ್ಚ ಕಡಿಮೆ ಆಗಲಿದ್ದು, ಗ್ರಾಹಕರಿಗೆಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಇದು ಅನುವು ಮಾಡಿಕೊಡುತ್ತದೆ. ಅಲ್ಲದೇ, ಸಾಲಗಳ ಮೇಲಿನ ಇಎಂಐಗಳ ಮೊತ್ತ ಕಡಿಮೆ ಮಾಡಲಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೊ ದರ ಕಡಿಮೆ ಮಾಡಲು ಹಣಕಾಸು ಸಮಿತಿಯು ಸರ್ವಾನುಮತದಿಂದ ಒಪ್ಪಿಕೆ ನೀಡಿದೆ. ಈ ವರ್ಷ 2ನೇ ಬಾರಿ ರೆಪೋ ದರವನ್ನು ಕಡಿಮೆ ಮಾಡಿದ್ದೇವೆ. ಇದಕ್ಕೂ ಮೊದಲು ಫೆಬ್ರವರಿಯಲ್ಲೂ ದರ ಕಡಿಮೆ ಆಗಿತ್ತು ಎಂದರು.
ಖರೀದಿ ಒಪ್ಪಂದದ ದರ ಎಂದು ಕರೆಯಲ್ಪಡುವ ರೆಪೋ ದರವೂ, ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ಆರ್‌ಬಿಐ ವಿಧಿಸುವ ಬಡ್ಡಿದರವಾಗಿದೆ. ಆದ್ದರಿಂದ ರೆಪೋ ದರ ಕಡಿಮೆ ಮಾಡಿದಾಗ, ಬ್ಯಾಂಕುಗಳಿಗೆ ಪ್ರಯೋಜನವಾಗುತ್ತವೆ. ಈ ಪ್ರಯೋಜನವನ್ನು ಬಹುತೇಕ ಬ್ಯಾಂಕುಗಳು ನಿಯಮಿತವಾಗಿ ಗ್ರಾಹಕರಿಗೆ ವರ್ಗಾಯಿಸುತ್ತವೆ.
ಜಾಗತಿಕ ಆರ್ಥಿಕತೆಗೆ ಆತಂಕಕಾರಿಯಾಗಿ ಹಣಕಾಸು ವರ್ಷ ಆರಂಭವಾಗುತ್ತಿದ್ದು, ಜಾಗತಿಕ ಅನಿಶ್ಚಿತತೆಗಳಿಂದ ಹೊರಹೊಮ್ಮುವ ಹಣದುಬ್ಬರದ ಅಪಾಯಗಳ ಮೇಲೆ, ಆರ್‌ಬಿಐ ತೀವ್ರ ನಿಗಾ ಇಟ್ಟಿದೆ ಎಂದು ಸಂಜಯ್ ಮಲ್ಹೋತ್ರಾ ಇದೇ ವೇಳೆ ಹೇಳಿದರು.





