ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಗೆ ರಾಯ್‌ಬರೇಲಿ ನ್ಯಾಯಾಲಯ ಸಮನ್ಸ್ ನೀಡಿದೆ.
ಈ ಕುರಿತಂತೆ ವಿಚಾರಣೆಗೆ ಹಾಜರಾಗಲು ಉತ್ತರ ಪ್ರದೇಶದ ರಾಯ್ ಬರೇಲಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸುಧೀರ್ ಕುಮಾರ್ ಅವರು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ನೀಡಿದ್ದಾರೆ.
ದೇಶದಲ್ಲಿ ಬಡವರು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಅವರ ಆಸ್ತಿ ಮಾತ್ರ ಅತ್ಯಂತ ಕಡಿಮೆ ಇದೆ. ಇದು ಹೀಗೆ ಮುಂದುವರಿದರೆ ಅತಿ ಹೆಚ್ಚಿನ ಜನಸಂಖ್ಯೆ ಇರುವವರು ದೇಶದ ಆಸ್ತಿಗೆ ಬೇಡಿಕೆ ಇಡಬೇಕಾಗುತ್ತದೆ ಎಂದು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದರು.
ಈ ಹೇಳಿಕೆಯು ದೇಶದ ದುರ್ಬಲ ವರ್ಗದವರಲ್ಲಿ ದ್ವೇಷ ಬಿತ್ತುತ್ತದೆ ಎಂದು ಆರೋಪಿಸಿದ ಪಂಕಜ್ ಪಾಠಕ್ ಎಂಬುವವರು ದೂರು ನೀಡಿದ್ದರು. ಇಂದು ದೂರುದಾರರ ಪರ ವಕೀಲ ವೀರೇಂದ್ರ ಪಾಲ್ ಗುಪ್ತಾ ನ್ಯಾಲಯದಲ್ಲಿ ಸುದೀರ್ಘ ವಾದ ಮಂಡಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ನ್ಯಾಯಾಲಯವು ಸಮನ್ಸ್ ನೀಡಿದೆ.
ಇದಕ್ಕೂ ಮೊದಲು ದೂರುದಾರ ಪಂಕಜ್ ಪಾಠಕ್, ಶಾಸಕರು ಹಾಗೂ ಸಂಸದರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದು ತಿರಸ್ಕೃತವಾದ ನಂತರ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು.
ಈಗ ರಾಹುಲ್ ಗಾಂಧಿಗೆ ಸೆಷನ್ಸ್ ನ್ಯಾಯಾಲಯ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲೇಬೇಕು ಎಂದು ಖಡಕ್ ಸೂಚನೆ ನೀಡಿದೆ.