ನವದೆಹಲಿ: ಖಾಸಗಿಯವರಿಗೆ ಅವಕಾಶ ಮಾಡಿಕೊಡಲು ಲ್ಯಾಟರಲ್ ಎಂಟ್ರಿಯ ಜಾಹೀರಾತನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ನಾವು ಯಾವುದೇ ಬೆಲೆ ತೆತ್ತಾದರೂ ಸಂವಿಧಾನ ಹಾಗೂ ಮೀಸಲಾತಿ ವ್ಯವಸ್ಥೆಯನ್ನು ರಕ್ಷಣೆ ಮಾಡುತ್ತೇವೆ. ಲ್ಯಾಟರಲ್ ಎಂಟ್ರಿಯಂತಹ ಬಿಜೆಪಿಯ ಸಂಚನ್ನು ವಿಫಲಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇಕಡಾ 50ರ ಮೀಸಲಾತಿ ಮಿತಿಯನ್ನು ತೆರವುಗೊಳಿಸುವ ಮೂಲಕ ನಾವು ಜಾತಿ ಜನಗಣತಿಯ ಆಧಾರದ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಲಿದ್ದೇವೆ. ನಾವು ಸಂವಿಧಾನ ಉಳಿಸಿಕೊಳ್ಳಲು ಹಗಲಿರುಳು ಶ್ರಮ ವಹಿಸುತ್ತೇವೆ. ಸಂವಿಧಾನ ಹಾಗೂ ಮೀಸಲಾತಿ ವ್ಯವಸ್ಥೆ ರಕ್ಷಣೆಯೇ ನಮ್ಮ ಮುಂದಿನ ಗುರಿ ಎಂದು ಭರವಸೆ ನೀಡಿದರು.
ಇನ್ನು ಸರ್ಕಾರದ ಉನ್ನತ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಖಾಸಗಿ ವಲಯದ ತಜ್ಞರು ಹಾಗೂ ಪರಿಣಿತರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ಹಾಗೂ ವಿಪಕ್ಷಗಳು ವಿರೋಧಿಸಿದ್ದವು. ಅಲ್ಲದೇ ಲ್ಯಾಟರಲ್ ಎಂಟ್ರಿ ಕ್ರಮವು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಕಸಿದುಕೊಳ್ಳುವ ನಡೆ ಎಂದು ಆರೋಪಿಸಿದ್ದವು.
ಆಗಸ್ಟ್.17ರಂದು ಯುಪಿಎಸ್‌ಸಿ 45 ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪಕಾರ್ಯದರ್ಶಿಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ನೇಮಕ ಮಾಡಲು ಅಧಿಸೂಚನೆಯನ್ನು ಹೊರಡಿಸಿತು.
ಇದನ್ನು ಸರ್ಕಾರಿ ಇಲಾಖೆಗಳಲ್ಲಿ ತಜ್ಞರ ನೇಮಕಾತಿ ಎಂದು ಉಲ್ಲೇಖಿಸಲಾಗುತ್ತದೆ. ಈ ನಿರ್ಧಾರವು ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳ ಮೀಸಲಾತಿ ಹಕ್ಕುಗಳನ್ನು ದುರ್ಬಲಗೊಳಿಸಿದೆ ಎಂದು ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿತ್ತು.