ನವದೆಹಲಿ: ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಳೆದ 2018ರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕೈ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಇಂದಿನ ವಿಚಾರಣೆ ವೇಳೆ ರಾಹುಲ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಪ್ರಕರಣದಲ್ಲಿ ಮೂರನೇ ವ್ಯಕ್ತಿಯಿಂದ ದೂರು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿರುವುದನ್ನು ಅನುಮತಿಸಬಾರದು ಎಂದು ವಾದ ಮಂಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಅಂತಿಮವಾಗಿ ಕೋರ್ಟ್ ಜಾರ್ಖಂಡ್ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿದೆ. ಮುಂದಿನ ಆದೇಶದವರೆಗೆ ವಿಚಾರಣೆಯಲ್ಲಿನ ಎಲ್ಲಾ ಪ್ರಕ್ರಿಯೆಗಳು ತಡೆಹಿಡಿಯಲ್ಪಡುತ್ತವೆ ಎಂದು ಹೇಳಿದೆ.
ಕಳೆದ 2018ರ ಮಾರ್ಚ್.18ರಂದು ಜಾರ್ಖಂಡ್‌ನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಅಮಿತ್ ಶಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅಮಿತ್ ಶಾ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಮುಖಂಡ ನವೀನ್ ಝಾ, ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು.





