ವಯನಾಡ್: ಬೃಹತ್ ರೋಡ್ ಶೋ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ( ಏಪ್ರಿಲ್ 3 ) ನಾಮಪತ್ರ ಸಲ್ಲಿಸಿದರು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲೂ ಕೇರಳದ ವಯನಾಡ್ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಸುವ ಮೊದಲು ಕ್ಷೇತ್ರದಾದ್ಯಂತ ಮೆಗಾ ರೋಡ್ ಶೋ ನಡೆಸಿದರು. ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸಹ ಸಾಥ್ ನೀಡಿದರು.
ಹೆಲಿಕಾಪ್ಟರ್ ಮೂಲಕ ಇಂದು (ಏಪ್ರಿಲ್3) 10:30ಕ್ಕೆ ಕಣ್ಣೂರಿನಿಂದ ವಯಾನಂದ್ ಗ್ರಾಮದ ಮುಪ್ಪೈನಾಡ್‌ನಲ್ಲಿರುವ ಹೆಲಿಪ್ಯಾಡ್‌ಗೆ ಬಂದಿಳಿದರು. ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಹೆಲಿಪ್ಯಾಡ್ ಸುತ್ತಮುತ್ತ ಬೆಳಗ್ಗೆಯಿಂದಲೇ ಕಾಯುತ್ತಿದ್ದರು. ರೋಡ್‌ಶೋ ಆರಂಭವಾಗುತ್ತಿದ್ದಂತೆ ತೆರೆದ ವಾಹನದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರು ಕಾರ್ಯಕರ್ತರತ್ತ ಕೈ ಬೀಸಿದರು.
ರಸ್ತೆ ಬದಿ ನೆರೆದಿದ್ದ ಸಾವಿರಾರು ಜನರು ರಾಹುಲ್ ಗಾಂಧಿ ಪರ ಘೋಷಣೆ ಕೂಗಿದರು. ಜೊತೆಗೆ ʼಡೌನ್ ಡೌನ್ ನರೇಂದ್ರ ಮೋದಿʼ ಅಂತಲೂ ಘೋಷಣೆ ಕೂಗಿದರು.
ಮೆರವಣಿಗೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ದೀಪಾ ದಾಸ್, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಎಐಸಿಸಿ ಉಸ್ತುವಾರಿ ಕನ್ಹಯ್ಯಾ ಕುಮಾರ್, ಕೆಪಿಸಿಸಿ ಹಂಗಾಮಿ ಅಧ್ಯಕ್ಷ ಎಂ.ಎಂ ಹಾಸನ್ ರಾಹುಲ್ ಗಾಂಧಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮತ್ತಿತರ ಮುಖಂಡರು ಇದ್ದರು.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಇದೇ ರಾಹುಲ್ ಗಾಂಧಿ ಒಟ್ಟು 7,06,367 ಮತ ಗಳಿಸುವ ಮೂಲಕ ಪ್ರತಿಸ್ಪರ್ಥಿ ಸಿಪಿಐ ಅಭ್ಯರ್ಥಿಯನ್ನು ಸೋಲಿಸಿದರು. ಕೇರಳದ ವಯನಾಡ್ ಕ್ಷೇತ್ರಕ್ಕೂ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ.




