ನವದೆಹಲಿ: ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ಮತದಾರರ ಪಟ್ಟಿಯಲ್ಲಿ ನಕಲಿ ಜನರನ್ನು ಸೇರಿಸಲಾಗುತ್ತಿದೆ ಎಂದು ದಾಖಲೆ ಸಮೇತ ಮತಗಳ್ಳತನ ನಡೆದಿರುವುದನ್ನು ಬಯಲಿಗೆಳೆದಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿದರು. ಮಹದೇವಪುರ ವಿಧಾನಸಭಾ ಕ್ಷೇಥ್ರದಲ್ಲಿ 6.5 ಲಕ್ಷ ಮತಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಮಹದೇವಪುರದಲ್ಲಿ ಒಬ್ಬನೇ ಮತದಾರನಿಂದ ಹಲವು ಮತಗಟ್ಟೆಯಲ್ಲಿ ಮತದಾನ ಮಾಡಲಾಗಿದೆ. ಇದೇ ರೀತಿ 11 ಸಾವಿರಕ್ಕೂ ಹೆಚ್ಚು ಜನರಿಂದ ನಕಲಿ ಮತದಾನ ಮಾಡಲಾಗಿದೆ ಎಂದು ಹೇಳಿದರು. ಇನ್ನು 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಮತಗಳ್ಳತನ ನಡೆದಿದ್ದು, ಅಂತಿಮ ಫಲಿತಾಂಶ ಬಂದ ನಂತರ ಗೊತ್ತಾಗಿದೆ ಎಂದು ಹೇಳಿದರು.





