ನವದೆಹಲಿ: ಕೇರಳ ಮಾಜಿ ಮುಖ್ಯಮಂತ್ರಿ, ಕೇರಳದ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಉಮ್ಮನ್ ಚಾಂಡಿ ಸ್ಮರಣಾರ್ಥವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಉಮ್ಮನ್ ಚಾಂಡಿ ಸಾಮಾಜಿಕ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಂಸದ ಶಶಿ ತರೂರ್ ಅವರ ಅಧ್ಯಕ್ಷತೆಯಲ್ಲಿ ನುರಿತ ತೀರ್ಪುಗಾರರ ಸಮಿತಿಯು ರಾಹುಲ್ ಗಾಂಧಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಉಮ್ಮನ್ ಚಾಂಡಿ ಫೌಂಡೇಷನ್ ಭಾನುವಾರ (ಜು.21) ರಾಹುಲ್ ಗಾಂಧಿ ಅವರಿಗೆ ಮೊದಲ ಉಮ್ಮನ್ ಚಾಂಡಿ ಸಮಾಜ ಸೇವಕ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದೆ. ಈ ಪ್ರಶಸ್ತಿ ಜತೆಗೆ ಒಂದು ಲಕ್ಷ ನಗದು ಹಾಗೂ ಕಲಾಕೃತಿ (ಖ್ಯಾತ ಕಲಾವಿದ ನೇಮೊನ್ ಪುಷ್ಪರಾಜ್ ವಿನ್ಯಾಸಿಸಿದ ಕಲಾಕೃತಿ) ನೀಡಲಾಗುವುದು ಎಂದು ಘೋಷಿಸಿದೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ದೇಶಾದ್ಯಂತ ಜನರ ಕಷ್ಟಗಳನ್ನು ಆಲಿಸಿ, ಅವರ ಕಷ್ಟಗಳಿಗೆ ಧನಿಯಾಗಿದ್ದ ರಾಹುಲ್ ಅವರ ಕಾರ್ಯ ಸಾಧನೆಗಾಗಿ ಈ ಪ್ರಶಸ್ತಿ ಸಲ್ಲುತ್ತಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.





