ಚೆನ್ನೈ: ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ ಟಿಎಎಸ್‌ಎಂಸಿ ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ಆಯೋಜಿಸಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಸೇರದಂತೆ ಪಕ್ಷದ ಹಲವು ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಜಾರಿ ನಿರ್ದೇಶನಾಲಯವೂ, ಟಿಎಎಸ್‌ಎಂಎಸಿ ನಲ್ಲಿ ಸುಮಾರು 1 ಸಾವಿರ ಕೋಟಿ ರೂ.ಗಳಷ್ಟು ಆರೋಪ ನಡೆದಿದೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಟಿಎಎಸ್‌ಎಂಎಸಿಯ ಮುಖ್ಯ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ತಮಿಳುನಾಡು ಬಿಜೆಪಿ ಪಕ್ಷ ಹೇಳಿತ್ತು.
ಕಪ್ಪು ಶರ್ಟ್ ಧರಿಸಿ ಇಂದು(ಮಾರ್ಚ್.17) ತೆರಳುತ್ತಿದ್ದ ವೇಳೆ ಪೊಲೀಸರು ಅಣ್ಣಾಮಲೈ ಅವರನ್ನು ಅವರ ನಿವಾಸದ ಬಳಿಯೇ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವನತಿ ಶ್ರೀನಿವಾಸನ್, ಕಾರ್ಯಕರ್ತರಾದ ವಿನೋಜ್ ಪಿ.ಸೆಲ್ವಂ ಹಾಗೂ ಅಮರ್ ಪ್ರಸಾದ್ ರೆಡ್ಡಿಯವರನ್ನೂ ಕೂಡ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಣ್ಣಾಮಲೈ ಅವರು, ತಮಿಳಿಸೈ ಸೌಂದರ ರಾಜನ್ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಪೊಲೀಸರು ಗೃಹಬಂಧನದಲ್ಲ ಇರಿಸಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.





