ಶ್ರೀನಗರ: ಜಮ್ಮು-ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಝಡ್-ಮೋರ್ಹ್ ಸುರಂಗ ಮಾರ್ಗ ಉದ್ಘಾಟಿಸಿದರು.
ಇದು 2024ರ ವಿಧಾನಸಭಾ ಚುನಾವಣೆ ಬಳಿಕ ಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ಮೋದಿ ಅವರ ಮೊದಲ ಭೇಟಿಯಾಗಿದೆ.
ಇಂದು ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರು, ಹೆಲಿಕಾಪ್ಟರ್ ಮೂಲಕ ತೆರಳಿ ಸುರಂಗ ಮಾರ್ಗ ಉದ್ಘಾಟಿಸಿದರು. ಮೋದಿ ಜೊತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರದ ಸಿಎಂ ಓಮರ್ ಅಬ್ದುಲ್ಲಾ, ರಾಜ್ಯಪಾಲ ಮನೋಜ್ ನಿನ್ಹಾ ಸೇರಿದಂತೆ ಇತರ ನಾಯಕರ ಜೊತೆಗಿದ್ದರು.
ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಗಗಾಂಗೀರ್ ಮತ್ತು ಸೋನಾಮಾರ್ಗ್ ನಡುವಿನ 6.5 ಕಿ.ಮೀ ಉದ್ದದ 2 ಪಥದ ರಸ್ತೆ ಸುರಂಗದಲ್ಲಿ ತುರ್ತು ಪರಿಸ್ಥಿತಿಗಾಗಿ ಸಮಾನಾಂತರ 7.5 ಮೀಟರ್ ಎಸ್ಕೇಪ್ ಮಾರ್ಗವನ್ನು ನಿರ್ಮಿಸಲಾಗಿದೆ.
ಸಮುದ್ರ ಮಟ್ಟಕ್ಕಿಂತ 8650 ಅಡಿ ಎತ್ತರದಲ್ಲಿ ನಿರ್ಮಿಸಿರುವ ಈ ಸುರಂಗವು ಶ್ರೀನಗರ ಮತ್ತು ಸೋನಾಮಾರ್ಗ ನಡುವೆ ಲೇಹ್‌ಗೆ ಹೋಗುವ ಮಾರ್ಗದಲ್ಲಿ ಎಲ್ಲಾ ಋತುಮಾನದಲ್ಲೂ ಸಂಪರ್ಕ ಕಲ್ಪಿಸುತ್ತದೆ.
2700 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ 6.5 ಕಿ.ಮೀ ಉದ್ದದ ಝಡ್-ಮೋರ್ಹ್ ಸುರಂಗದಲ್ಲಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಚಲಿಸುವ ಅವಕಾಶವಿದೆ. ಸುರಂಗವು ಪ್ರತಿ ಗಂಟೆಗೆ 1000 ವಾಹನಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಎಲ್ಲಾ ಹವಾಮಾನಗಳಲ್ಲಿಯೂ ಸಂಚಾರಕ್ಕೆ ಯೋಗ್ಯವಾಗಿರುವ ಈ ಸುರಂಗವು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೂ ಸಂಪರ್ಕ ಕಲ್ಪಿಸಲಿದೆ. ಜೊತೆಗೆ ಇದರಿಂದ ಸೇನೆಯ ಓಡಾಟಕ್ಕೂ ತೀವ್ರ ಅನುಕೂಲವಾಗಲಿದೆ.





