ನವದೆಹಲಿ: ಇದೇ ಆಗಸ್ಟ್.31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಭೇಟಿ ನೀಡಲಿದ್ದು, ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಆಗಸ್ಟ್.31ರಂದು ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾಗಲಿದ್ದಾರೆ.
ಇಬ್ಬರು ನಾಯಕರ ಭೇಟಿಯಾಗಿ ಸುಮಾರು ಒಂದು ವರ್ಷವಾಗಿದೆ. ಕೊನೆಯ ಸಭೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆಯಿತು.
ಅದರ ನಂತರ ಭಾರತ ಹಾಗೂ ಚೀನಾ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ತಮ್ಮ ಮಿಲಿಟರಿ ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆಗಳಲ್ಲಿ ಪ್ರಗತಿ ಸಾಧಿಸುವುದಾಗಿ ಘೋಷಿಸಿದ್ದವು.
ಈಗ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದು, ಮುಂದಿನ ಬೆಳವಣಿಗೆ ಸಂಬಂಧ ಏನೆಲ್ಲಾ ಚರ್ಚೆ ನಡೆಯಲಿದೆ ಎಂಬ ಕುತೂಹಲ ಮನೆಮಾಡಿದೆ.





