Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಯುಪಿಎಸ್‌ಸಿ ನೂತನ ಅಧ್ಯಕ್ಷರಾಗಿ ಪ್ರೀತಿ ಸೂದನ್‌ ಆಯ್ಕೆ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಪ್ರೀತಿಸುದನ್ ಆಯ್ಕೆಯಾಗಿದ್ದು, ಆಗಸ್ಟ್‌ 1 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಟ್ರೈನಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ವಿವಾದದ ಸಂದರ್ಭದಲ್ಲಿ ಯುಪಿಎಸ್‌ಸಿ ಮಾಜಿ ಅಧ್ಯಕ್ಷ ಮನೋಜ್‌ ಸೋನಿ ರಾಜೀನಾಮೆ ನೀಡಿದ ನಂತರ ಈ ಹುದ್ದೆ ಖಾಲಿಯಾಗಿತ್ತು. ಬಳಿಕ ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಪ್ರೀತಿಸುದನ್ ಅವರನ್ನು ಯುಪಿಎಸ್‌ಸಿ ಅಧ್ಯಕ್ಷರನ್ನಾಗಿ ರಾಷ್ಟಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಆಂಧ್ರಪ್ರದೇಶ ಕೇಡರ್‌ನ 1983 ರ ಬ್ಯಾಚ್‌ನ ಮಾಜಿ ಐಎಎಸ್ ಅಧಿಕಾರಿ ಪ್ರೀತಿ ಸುದನ್, ಕೋವಿಡ್ 19 ವೇಳೆ ಕೇಂದ್ರ ಆರೋಗ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು 2020 ರ ಜುಲೈನಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿಯು ಇವರಿಗಿದೆ.  ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣಾ ಸಚಿವಾಲಯಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರೀತಿಸುದನ್‌ ಅವರು ಏಪ್ರಿಲ್‌ 2025ರವರೆಗೆ ಈ ಯುಪಿಎಸ್‌ಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಇನ್ನೂ ಟ್ರೈನಿ ಐಎಎಸ್‌ ಪೂಜಾ ಖೇಡ್ಕರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳಿದ್ದು, ಅವರು ಸಲ್ಲಿಸಿರುವ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿದುಬಂದಿದ್ದು, ಹೀಗಾಗಿ ಅವರನ್ನು ತರಬೇತಿಯಿಂದ ತಡೆಹಿಡಿಯಲಾಗಿದೆ. ಜತೆಗೆ ಟ್ರೈನಿ ಅಧಿಕಾರಿ ವಿರುದ್ಧ ಯುಪಿಎಸ್‌ಸಿ ಎಫ್‌ಐಆರ್‌ ಕೂಡ ದಾಖಲಿಸಿದೆ.

Tags: