ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ರಷ್ಯಾ ಹಾಗೂ ಆಸ್ಟ್ರೀಯಾ ಪ್ರವಾಸವನ್ನು ಕೈಗೊಂಡಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ರಷ್ಯಾ ಪ್ರವಾಸ ಕೊಂಡಿದ್ದು, ಇಂದು ಮತ್ತು ನಾಳೆ ರಷ್ಯಾದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಬಳಿಕ ಬುಧವಾರ ಆಸ್ಟ್ರಿಯಾಗೆ ತೆರಳಿ ಗುರುವಾರದ ವರೆಗೂ ಅಲ್ಲೆ ಇರಲಿದ್ದಾರೆ.
ಇನ್ನು ಭಾರತ ಮತ್ತು ರಷ್ಯಾ ವಾರ್ಷಿಕ ಶೃಂಗಸಭೆಯು ಮೋದಿಯವರ ರಷ್ಯಾ ಭೇಟಿಯ ಪ್ರಮುಖ ಅಜೆಂಡಾವಾಗಿದ್ದು, ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಮೊದಲ ಭೇಟಿಯಲ್ಲಿ ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಲಿದ್ದಾರೆ. ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಇಂದು ನರೇಂದ್ರ ಮೋದಿ ಅವರಿಗೆ ಔತಣ ಕೂಡ ಏರ್ಪಡಿಸಿದ್ದಾರೆ. ನಾಳೆ ಶೃಂಗಾಸಭೆ ನಡೆಯಲಿದ್ದು, ಉಭಯ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
೨೨ ನೇ ಭಾರತ –ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವ್ಲಾಡಿಮಿರ್ ಪುಟಿನ್ ಅವರ ವಿಶೇಷ ಆಹ್ವಾನದೊಂದಿಗೆ ಪ್ರಧಾನಿ ಇಂದು ರಷ್ಯಾಗೆ ಭೇಟಿ ಕೊಟ್ಟಿದ್ದು, ಉಭಯ ದೇಶಗಳ ನಡುವಿನ ಉತ್ತಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಇದು ನಿಜಕ್ಕೂ ಸಹಕಾರಿಯಾಗಲಿದೆ ಎಂದರೆ ತಪ್ಪಾಗಲಾರದು.





