ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಅವರು ವಯೋಸಹಜ ಕಾಯಿಲೆಯಿಂದ ಸೋಮವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಅವರು, ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕರ್ನಾಟಕದ ತುಳಸಿ ಗೌಡ ಅವರ ನಿಧನದಿಂದ ತುಂಬಾ ದುಃಖವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಕೃತಿಯನ್ನು ಪೋಷಿಸಲು, ಪರಿಸರ ಸಂರಕ್ಷಿಸಲು ತಮ್ಮ ಜೀವನ ಮುಡಿಪಾಗಿಟ್ಟಿದ್ದರು:
ಸಾವಿರಾರು ಸಸಿಗಳನ್ನು ನೆಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಪರಿಸರ ಸಂರಕ್ಷಿಸಲು ಹಾಗೂ ಮುಂದಿನ ಪೀಳಿಗೆಗೆ ಶುದ್ಧ ಗಾಳಿಯ ವಾತಾವರಣ ನಿರ್ಮಾಣ ಮಾಡುವ ಕಾಯಕಕ್ಕೆ ಕೈ ಹಾಕಿದ್ದರು. ಇವರು ಪರಿಸರ ಸಂರಕ್ಷಣೆಗೆ ಮಾರ್ಗದರ್ಶಕ ಬೆಳಕಾಗಿ ಉಳಿಯುತ್ತಾರೆ. ಇವರ ಪರಿಸರ ಸಂರಕ್ಷಣೆಯ ಕೆಲಸ ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ತುಳಸಿ ಗೌಡ ಅವರು ಹಾಲಕ್ಕಿ ಬುಡಕಟ್ಟು ಜನಾಂಗದ ಮಹಿಳೆಯಾಗಿದ್ದು, ಅವರಿಗೆ 86 ವರ್ಷ ವಯಸ್ಸಾಗಿದೆ. ಇವರಿಗೆ ಸುಬ್ರಾಯ ಮತ್ತು ಸೋಮಿ ಎಂಬ ಇಬ್ಬರು ಮಕ್ಕಳಿದ್ದು, ನಾಲ್ಕು ಜನ ಮೊಮ್ಮಕ್ಕಳಿದ್ದಾರೆ.
ವರ್ಷಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸುತ್ತಿದ್ದರು. ಲಕ್ಷಾಂತರ ಗಿಡಳನ್ನು ಬೆಳೆಸಿದ ಕೀರ್ತಿ ಇವರದು. ತಮ್ಮ ಎರಡು ಮಕ್ಕಳನ್ನು ಸಾಕಲು ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ ಇವರು, ಅಳಿವಿನಂಚಿನಲ್ಲಿರುವ ಹಲವು ಕಾಡು ಬೀಜಗಳನ್ನು ಸಂಗ್ರಹಿಸಿ ಸಸಿ ಮಾಡಿ ಅವುಗಳನ್ನು ಬೆಳೆಸುವ ಮೂಲಕ ಹಸಿರು ಕ್ರಾಂತಿ ಮಾಡಿದ್ದಾರೆ.





